ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, 24 ಗಂಟೆಯಲ್ಲಿ 6670 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ 1,64,924 ಖಚಿತ ಸೋಂಕು ದೃಢಪಟ್ಟಿಸಿದೆ. ಇತ್ತ ಸೋಂಕಿತರ ಸಂಪರ್ಕಿತರ ಸಂಖ್ಯೆ ಕೂಡ 3,58,495 ಕ್ಕೆ ಏರಿಕೆ ಆಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಾಥಮಿಕ ಹಂತದಲ್ಲಿ 1,93,137 ದ್ವಿತೀಯ ಹಂತದಲ್ಲಿ 1,65,358 ಸಂಪರ್ಕ ವ್ಯಕ್ತಿಗಳು ನಿಗಾವಣೆವಯಲ್ಲಿ ಇದ್ದಾರೆ. ಇಂದು 101 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ ನಿಂದ ಸಾವನ್ನಪ್ಪಿದ್ದರೆ, 2998ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಇನ್ನು ಮುಂದಿನ 24 ಗಂಟೆಯಲ್ಲಿ ಸಾವಿನ ಸಂಖ್ಯೆ 3 ಸಾವಿರ ಗಡಿದಾಟುವ ಆತಂಕ ಸೃಷ್ಟಿಯಾಗಿದೆ. ತೀವ್ರ ನಿಗಾ ಘಟಕದಲ್ಲಿ 678 ಜನರು ಚಿಕಿತ್ಸೆ ಪಡೆಯುತ್ತಿದ್ದು, 84,232 ಮಂದಿ ಗುಣಮಖರಾಗಿದ್ದು, 77,686 ಸಕ್ರಿಯ ಪ್ರಕರಣಗಳಿವೆ.
ಇನ್ನು ರಾಜ್ಯ ಸರ್ಕಾರ ಕರ್ತವ್ಯ ನಿರತ ರಾಜ್ಯದ ಎಲ್ಲ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಸೋಂಕಿನಿಂದ ನಿಧನರಾದ ಸಂದರ್ಭದಲ್ಲಿ ವಿಮಾ - ಪರಿಹಾರ ಮೊತ್ತವನ್ನ ಮಂಜೂರು ಮಾಡಿ ಆದೇಶಿಸಲಾಗಿದೆ.
ಮತ್ತೊಂದು ಕಡೆ ಆರೋಗ್ಯ ಇಲಾಖೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯನ್ನು ಆವೃತ್ತಿ-4 ಸುತ್ತೋಲೆಯನ್ನು ಹೊರಡಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಲು ಇಚ್ಛಿಸಿದರೆ ಮೊದಲು ಯಾತ್ರಿ ಕರ್ನಾಟಕ ಆನ್ ಲೈನ್ ಪೋರ್ಟಲ್ನಲ್ಲಿ ನಮೂದಿಸಬೇಕು.
ಯಾವ ಕಾರಣಕ್ಕಾಗಿ ಬ್ಯುಸಿನೆಸ್ ಅಥವಾ ಶಾರ್ಟ್ ಟೈಂ ಟ್ರಾವೆಲ್ಗಾಗಿ ಬರುವುದಾದರೆ ಕೋವಿಡ್ ಪರೀಕ್ಷೆ ಮಾಡಿಸಿ ನೆಗಟಿವ್ ಎಂಬ ವರದಿ ತರುವುದು ಕಡ್ಡಾಯ. ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್, ಕ್ವಾರಂಟೈನ್ ವಾಚ್ ಆ್ಯಪ್, ಆಪ್ತಮಿತ್ರ ಆ್ಯಪ್ ಮೊಬೈಲ್ ನಲ್ಲಿ ಇರುವುದು ಕಡ್ಡಾಯ ಮಾಡಲಾಗಿದೆ.