ಬೆಂಗಳೂರು: ವ್ಯಕ್ತಿ ಮಾತೃಭಾಷೆಯಲ್ಲಿ ಮಾತನಾಡಿದರೆ ಅದು ಹೃದಯ ತಲುಪುತ್ತದೆ. ಇಂಗ್ಲಿಷ್ ಮತ್ತಿತರ ಭಾಷೆಗಳು ಕೇವಲ ಬುದ್ಧಿಯ ಭಾಷೆಯೇ ಹೊರತು ಹೃದಯದ ಭಾಷೆ ಅಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಸಾಧಕರಿಗೆ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಕನ್ನಡ ಅಲ್ಪಸಂಖ್ಯಾತ ಭಾಷೆ ಆಗುತ್ತಿರುವುದು ಆತಂಕ. ಇಂಗ್ಲಿಷ್ ಸಂಬಳಕ್ಕೆ, ಕನ್ನಡ ಉಂಬಳಕ್ಕೆ ಆಗಬಾರದು. ಕನ್ನಡವು ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಆಡಳಿತದಲ್ಲಿ ಕನ್ನಡಕ್ಕೆ ಸರ್ಕಾರ ಬದ್ಧವಾಗಿದೆ. ನಾಡು, ನುಡಿ, ಜನರ ಸಂರಕ್ಷಣೆಗೆ ಸರ್ಕಾರ ಸಿದ್ಧ. ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸಮಿತಿ ಸದಸ್ಯರ ಒಕ್ಕೊರಲ ಅಭಿಪ್ರಾಯದಂತೆ ಸಾಧಕರ ಆಯ್ಕೆ ಮಾಡಿದ್ದೇವೆ. ಈ ವರ್ಷ ಪ್ರಶಸ್ತಿ ಸಿಗದೇ ಇರುವ ಗಣ್ಯರನ್ನು ಮುಂದಿನ ವರ್ಷ ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ಸಂಸ್ಕೃತಿ ಹಾಗೂ ಭಾಷೆ ಒಂದನ್ನೊಂದು ಬಿಟ್ಟು ಇರಲಾರವು. ಭಾಷೆಯನ್ನು ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತೇವೆ. ಎರಡನ್ನೂ ಉಳಿಸಿಕೊಳ್ಳುವುದು ವರ್ತಮಾನದ ಸವಾಲು. ಈ ಸವಾಲನ್ನು ನಾವು ಸ್ವೀಕರಿಸಲೇಬೇಕು. ಎಷ್ಟೇ ಚೆನ್ನಾಗಿ ಇಂಗ್ಲಿಷ್ ಕಲಿತರೂ ನಾವು ಕನ್ನಡಿಗರೇ ಎಂದು ತಿಳಿಸಿದರು.
ಎರಡೂವರೆ ಸಾವಿರ ಜನರ ಹೆಸರಿನಲ್ಲಿ 64 ಸಾಧಕರನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಆಯ್ಕೆ ಆಗದವರ ಸಾಧನೆಯೂ ಕಡಿಮೆಯಿಲ್ಲ. ಎಲ್ಲರೂ ಈ ಸವಾಲನ್ನು ಸ್ವೀಕರಿಸಬೇಕು. ಕನ್ನಡ ಎಂದರೆ ಕುಣಿದಾಡುವುದೆನ್ನೆದೆ ಎಂದು ಕುಣಿದಾಡಿದರೆ ಸಾಲದು, ಎಲ್ಲರೂ ಒಟ್ಟಿಗೆ ಬಾಳುವ ತೆರದಲ್ಲಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.