ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯದೆ ಮಕ್ಕಳ ಕಲಿಕೆಯಲ್ಲಿ ಕಲಿಕಾ ಹಿನ್ನಡೆ ಉಂಟಾಗಿತ್ತು. ಇದನ್ನ ಸರಿದೂಗಿಸಲು ಶಿಕ್ಷಣ ಇಲಾಖೆ ರೂಪಿಸಿರುವ 'ಕಲಿಕಾ ಚೇತರಿಕೆ' ಕಾರ್ಯಕ್ರಮವನ್ನು ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಿದರು. ಇದೇ ವೇಳೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೈಪಿಡಿಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತಾನಡಿದ ಸಚಿವ ನಾಗೇಶ್, ಕೋವಿಡ್ ಬಂದಾಗ ಆರಂಭದಲ್ಲಿ ಕೇವಲ ಆರೋಗ್ಯ ಇಲಾಖೆಗೆ ಇರುವ ಚಾಲೆಂಜ್ ಅಂತಾ ಅಂದುಕೊಂಡಿದ್ದೆವು. ಲಾಕ್ಡೌನ್ ಮಾಡಿದಾಗ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿತ್ತು. ಬಳಿಕ ತುಂಬಾ ಪರಿಣಾಮ ಬೀರಿದ್ದು ನಮ್ಮ ಶಿಕ್ಷಣ ಇಲಾಖೆಗೆ ಅಂತಾ ಅರಿವು ಆಯ್ತು.
ಶಾಲೆಗೆ ಬರದ ಮಕ್ಕಳಿಗೆ ಹೊಡೆತ ಕೊಟ್ಟಿದೆ ಅಂದುಕೊಂಡಿದ್ದೆವು. ಆದರೆ, ಈಗ ಎಲ್ಲಾ ರೀತಿಯ ಮಕ್ಕಳಿಗೂ ಈ ಸಾಂಕ್ರಾಮಿಕ ರೋಗ ದುಷ್ಪರಿಣಾಮ ಬೀರಿದೆ ಎಂಬ ಅರಿವು ಮೂಡಿದೆ. ಒಂದೂವರೆ ವರ್ಷ ಶಾಲೆಗೆ ಹೋಗದೇ ಮಕ್ಕಳ ಶಿಕ್ಷಣಕ್ಕೆ ಅಲ್ಲದೇ ಮಾನಸಿಕವಾಗಿಯೂ ತೊಂದರೆ ಕೊಟ್ಟಿದ್ದು ಗೊತ್ತೇ ಇದೆ. ಹೀಗಾಗಿ, ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮದ ಅಡಿ ಮಕ್ಕಳು ಮರೆತಿರುವುದನ್ನ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಅಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್.ಆರ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಎಂ.ದೀಪಾ ಹಾಗೂ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ರಿಷಿಕೇಶ್ ಉಪಸ್ಥಿತರಿದ್ದರು.
ಪಠ್ಯದಲ್ಲಿ ಭಗವದ್ಗೀತೆ : ಗುಜರಾತ್ ಸರ್ಕಾರ ಶೋಕ್ಲಗಳನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗುತ್ತಿದ್ದು, ರಾಜ್ಯದ ಶಿಕ್ಷಣ ಇಲಾಖೆಯು ಇದನ್ನು ಅಳವಡಿಸಿಕೊಳ್ಳುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು, ಗುಜರಾತ್ನಲ್ಲಿ ಮೊದಲ ಫೇಸ್ ಆಗಿ ಪಠ್ಯದಲ್ಲಿ ಭಗವದ್ಗೀತೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಈ ವರ್ಷದ ಪಠ್ಯಪುಸ್ತಕದಲ್ಲಿ ಯಾವುದೇ ಪ್ರಯತ್ನ ಇಲ್ಲ ಎಂದಿದ್ದಾರೆ.
ಆದರೆ, ಹೆಚ್ಚಿನ ಡಿಮ್ಯಾಂಡ್ ಬರುತ್ತಿದೆ. ಶಿಕ್ಷಣದಲ್ಲಿ ಸಾಕಷ್ಟು ಜ್ಞಾನ ನೀಡಲಾಗ್ತಿದೆ. ಆದರೆ, ಸಂಸ್ಕಾರ ಕೊಡ್ತಿಲ್ಲ ಎಂಬ ಮಾತು ಕೇಳಿಬರ್ತಿವೆ. ಹಿಂದೆ ವಾರಕ್ಕೊಂದು ದಿನ ಮಾರಲ್ ಸೈನ್ಸ್ ಇತ್ತು. ಅದನ್ನು ಈಗ ತೆಗೆದು ಹಾಕಲಾಗಿದೆ. ಮುಂದಿನ ದಿನ ಅದನ್ನ ಆರಂಭಿಸುವಂತೆ ಬೇಡಿಕೆ ಇದ್ದು, ಸಿಎಂ ಹಾಗೂ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಅಂದರು.
ಇದನ್ನೂ ಓದಿ: ಚಾಮರಾಜನಗರ ಬಸ್ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಸೋಮಣ್ಣ