ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಸಂಖ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯ ವಿಧೇಯಕದ ವರದಿಯನ್ನ ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.
2020ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕದ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ರಘು ವರದಿಯನ್ನು ಮಂಡಿಸಿದರು. ವಿಧೇಯಕದ ಅಂಶಗಳಿಗೆ ಸಂಬಂಧಿಸಿದಂತೆ ಸಮಿತಿ ಪರಿಶೀಲಿಸಿ ವರದಿ ನೀಡಲು ಕಾಲಾವಕಾಶವನ್ನು ವಿಶೇಷ ವರದಿಯಲ್ಲಿ ಕೋರಲಾಗಿದೆ.
ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು, ಪಾಲಿಕೆಗೆ ಚುನಾವಣೆ ನಡೆಸಬೇಕಾಗಿದೆ. ಆದರೆ, ಈಗಿನ ವಿದ್ಯಮಾನಗಳು, ಬೆಂಗಳೂರು ನಗರದಲ್ಲಿ ಹೆಚ್ಚಾದ ಜನಸಂಖ್ಯೆ ಹಾಗೂ ವಿಸ್ತಾರವಾದ ಪ್ರದೇಶವನ್ನು ಗಮನಿಸಿರುವ ಸಮಿತಿ 1976ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ-7ಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 7 (1) ಉಪಪ್ರಕರಣ (ಅ) ತಂಡದಲ್ಲಿ 200 ಎಂಬ ಪದಗಳಿಗೆ 250 ಎಂಬ ಪದಗಳನ್ನು ಪ್ರತಿಯೋಜಿಸಬೇಕೆಂದು ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 4ರಂದು ನಡೆದ ಸಮಿತಿ ಸಭೆಯಲ್ಲಿ ವರದಿ ಸಲ್ಲಿಸಲು ನವೆಂಬರ್ 10ರವರೆಗೆ ಕಾಲಾವಕಾಶ ಕೋರುವ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಸಭಾಧ್ಯಕ್ಷರು ಸಮಿತಿಯ ಅವಧಿಯನ್ನು ನವೆಂಬರ್ 10ರವರೆಗೆ ವಿಸ್ತರಿಸಿದ್ದಾರೆ.
ಬಿಬಿಎಂಪಿ ವಿಧೇಯಕವನ್ನು ಮಾರ್ಚ್‍ನಲ್ಲಿ ಮಂಡಿಸಿ ಪರ್ಯಾಲೋಚಿಸಲು ತೆಗೆದುಕೊಂಡ ಸಂದರ್ಭದಲ್ಲಿ ಉಭಯ ಸದನಗಳ ಜಂಟಿ ಪರಿಶೀಲನಾ ಸಮಿತಿಗೆ ವಹಿಸುವಂತೆ ಸದಸ್ಯರು ಒತ್ತಾಯಿಸಿದ್ದರು. ಆಗ ವಿಧೇಯಕ ಜಂಟಿ ಪರಿಶೀಲನಾ ಸಮಿತಿಗೆ ವಹಿಸಲು ಸದನ ನಿರ್ಣಯ ಕೈಗೊಂಡಿತ್ತು. ಅದರಂತೆ ರಘು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಇಂದು ಮಂಡನೆಯಾದ ಬಿಬಿಎಂಪಿ ಕಾಯ್ದೆಯಿಂದ ಈವರೆಗೆ ಇದ್ದ ಕೆಎಂಸಿ ಕಾಯ್ದೆಗೆ ಇತಿಶ್ರೀ ಹಾಡಿದಂತಾಗಿದೆ.