ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಜೂನ್ 28 ರಂದು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೋವಿಡ್ ನಿಯಮದಿಂದಾಗಿ ಅನುಮತಿ ದೊರೆಯದೇ ಮುಂದೂಡಲಾಗಿದೆ.
ಕೋವಿಡ್-19 ರ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದನ್ವಯ ಯಾವುದೇ ಸಭೆ, ಸಮಾರಂಭ ನಡೆಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿರುತ್ತದೆ ಹಾಗೂ ನಿಯಮಾವಳಿಗಳ ಉಲ್ಲಂಘನೆ ಕಾನೂನಿನ ಅಡಿ ಕ್ರಮಕ್ಕೆ ಆಸ್ಪದ ನೀಡಿದಂತಾಗುತ್ತದೆ ಮತ್ತು ಸದರಿ ನಿಯಮಾವಳಿಗಳು ಜಾರಿಯಲ್ಲಿರುವುದರಿಂದ ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತರು ಪತ್ರವನ್ನು ಜೆಡಿಎಸ್ ಕಚೇರಿಗೆ ರವಾನಿಸಿದ್ದಾರೆ.
![JDS postpones protests over price hike](https://etvbharatimages.akamaized.net/etvbharat/prod-images/kn-bng-04-jds-protest-postpone-script-7208083_26062021201855_2606f_1624718935_318.jpg)
ಹಾಗಾಗಿ, ಸೋಮವಾರ ಜೆ.ಪಿ. ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರುದ್ಧ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು. ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಹಕರಿಸಬೇಕಾಗಿ ವಿನಂತಿ ಎಂದು ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ. ಪ್ರತಿಭಟನೆ ನಡೆಸುವ ಸಂಬಂಧ ಇಂದು ಜೆಡಿಎಸ್ ಕಚೇರಿಯಲ್ಲಿ ಮುಖಂಡರು ಪೂರ್ವಭಾವಿ ಸಭೆ ನಡೆಸಿದ್ದರು.