ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದರು. ಇದಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಏನೇನು ಮಾಡಿದೆ ಎಂಬುದನ್ನು ಎಲ್ಲೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಪ್ರತಿ ಕುಟುಂಬಸ್ಥರ ಬಜೆಟ್. ಇದನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಬೇಕು. ನಾನು ಮಂಡಿಸದ ಬಜೆಟ್‌ನಲ್ಲೂ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಪ್ರಾಮಾಣಿಕವಾದ ಪ್ರಯತ್ನ, ಪಾರದರ್ಶಕವಾದ ಬಜೆಟ್ ಪ್ರಯತ್ನಿಸಿದ್ದೇನೆ ಎಂದರು. ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ವಲಯವಾರು ಮಾಹಿತಿಯೇ ಸಿಗುತ್ತಿಲ್ಲ. ಕೃಷಿಗೆ ಎಷ್ಟು, ನೀರಾವರಿಗೆ ಎಷ್ಟು, ಕಳೆದ ವರ್ಷ ಎಷ್ಟು ಘೋಷಿಸಲಾಗಿತ್ತು ಎಂಬುದು ಸೇರಿದಂತೆ ಇದ್ಯಾವುದರ ಮಾಹಿತಿಯೇ ಇಲ್ಲ ಎಂದರು.
'ಡಬಲ್ ಇಂಜಿನ್ ಅಲ್ಲ ಡಬ್ಬಾ ಸರ್ಕಾರ'
ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಎಲ್ಲ ಜನರು ಸಂಪೃತ್ತರಾಗಿರುತ್ತಾರೆ ಎಂದು ಭಾಷಣ ಮಾಡುತ್ತಿದ್ದರು. ಬಜೆಟ್ ಮಂಡನೆ ಬಳಿಕ ನನಗೆ ಅನಿಸುತ್ತೆ ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ, ಜನ ವಿರೋಧಿ, ಜನದ್ರೋಹದ ಬಜೆಟ್ ಇದು. ಗೊತ್ತು ಗುರಿ ಇಲ್ಲ, ಮುನ್ನೋಟ ಇಲ್ಲದ ಬಜೆಟ್ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಜನಸಾಮಾನ್ಯರ ಅವಶ್ಯಕತೆಗೆ ಒತ್ತು ಕೊಟ್ಟಿರುವ ಬಜೆಟ್: ಸಿಎಂ ಬೊಮ್ಮಾಯಿ