ಬೆಂಗಳೂರು : ಮೂರು ವರ್ಷದ ನಂತರ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ನೂತನವಾಗಿ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಅರುಣ್ ಸಿಂಗ್ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ಅಧಿಕೃತವಾಗಿ ಜವಾಬ್ದಾರಿ ನಿರ್ವಹಣೆ ಆರಂಭಿಸಲಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಉತ್ತರಪ್ರದೇಶ ಸಂಸದ ಅರುಣ್ ಸಿಂಗ್ ನೇಮಕಗೊಂಡಿದ್ದು, ರಾಜ್ಯ ಕಾರ್ಯಕಾರಿಣಿ ಮೂಲಕ ರಾಜ್ಯ ಬಿಜೆಪಿ ಉಸ್ತುವಾರಿ ಜವಾಬ್ದಾರಿಯನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಹ್ವಾನಿಸಿದ್ದಾರೆ. ಇದಕ್ಕೆ ಅರುಣ್ ಸಿಂಗ್ ಸಮ್ಮತಿ ನೀಡಿದ್ದು, ಕಾರ್ಯಕಾರಿಣಿ ಸಭೆಗೆ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ಬಸವ ಕಲ್ಯಾಣ, ಮಸ್ಕಿ ಅಭ್ಯರ್ಥಿಗಳ ಆಯ್ಕೆ, ಉಪ ಚುನಾವಣಾ ಸಿದ್ಧತೆ, ಸದ್ಯದಲ್ಲೇ ಎದುರಾಗಲಿರುವ ಗ್ರಾಮ ಪಂಚಾಯತ್ ಚುನಾವಣೆ ಕುರಿತು ಈ ಬಾರಿಯ ಕಾರ್ಯಕಾರಿಣಿ ಸಭೆ ವೇಳೆ ಚರ್ಚಿಸಲಾಗುತ್ತದೆ.
ಕಾರ್ಯಕಾರಣಿ ಸಭೆ ಜೊತೆಯಲ್ಲೇ ಪಕ್ಷದ ವಿಶೇಷ ಸಭೆ ಮತ್ತು ಕೋರ್ ಕಮಿಟಿ ಸಭೆಯನ್ನು ನಡೆಸಲಾಗುತ್ತದೆ. ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ನೇಮಕವಾದ ನಂತರ ಮೊದಲ ಬಾರಿಗೆ ಆಗಮಿಸುತ್ತಿರುವ ಅರುಣ್ ಸಿಂಗ್ ಸ್ವಾಗತಕ್ಕೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ನಾಯಕರು ಅರುಣ್ ಸಿಂಗ್ ರನ್ನು ಸ್ವಾಗತ ಮಾಡಲಿದ್ದಾರೆ.