ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯ ವೀಕ್ಷಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕ್ರೀಡಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಮಾರ್ಪಡಿಸಿ ನಗರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ: ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12.30ರವರೆಗೆ ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜಭವನ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಬ್ಬನ್ ಪಾರ್ಕ್ ರಸ್ತೆ, ಲ್ಯಾವೆಲ್ಲೇ ರಸ್ತೆ, ವಿಠಲ್ ಮಲ್ಯ ರಸ್ತೆ, ಬಿಷಪ್ ಕಾಟನ್ ಬಾಲಕಿಯರ ಶಾಲೆ ಸೇರಿದಂತೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ ಹೀಗಿದೆ..: ಕ್ರಿಕೆಟ್ ಪ್ರೇಕ್ಷಕರು ಹೊರತುಪಡಿಸಿ, ಉಳಿದ ವಾಹನ ಸವಾರರು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಮತ್ತು ರಾತ್ರಿ 10ರಿಂದ 12ರವರೆಗೆ ಎಂ.ಜಿ.ರಸ್ತೆ, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ, ಸೆಂಟ್ರಲ್ ಸೀಟ್ ರಸ್ತೆಗಳನ್ನು ಬಳಸದೆ ಇನ್‌ಫೆಂಟ್ರಿ ರಸ್ತೆಯಲ್ಲಿ ಸಂಚರಿಸಿ ಮುಂದೆ ಸಾಗಬಹುದು. ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲತಿರುವು ಪಡೆದು ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಮುಂದೆ ಸಾಗಬಹುದು.
ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ಎಲ್ಲಿ?: ಗೇಟ್ ನಂ 1 ರಿಂದ ಗೇಟ್ ನಂ.6 ಕಬ್ಬನ್ ರಸ್ತೆಯಲ್ಲಿದ್ದು ಪಾದಚಾರಿಗಳಿಗೆ, ಪ್ರೇಕ್ಷಕರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಗೇಟ್ ನಂ.7 ರಿಂದ ಗೇಟ್ ನಂ 11ರವರೆಗೆ ಲಿಂಕ್ ರಸ್ತೆಯಲ್ಲಿದ್ದು, ಅನಿಲ್ ಕುಂಬ್ಳೆ ವೃತ್ತ ಮತ್ತು ಬಿ.ಆರ್.ಎ. ವೃತ್ತದ ಕಡೆಯಿಂದ ಪ್ರೇಕ್ಷಕರು, ಪಾದಚಾರಿಗಳು ಹೋಗಬಹುದು.
ವಾಹನ ನಿಲುಗಡೆಗೆ ವ್ಯವಸ್ಥೆ ಹೀಗಿದೆ: ಪಂದ್ಯ ವೀಕ್ಷಣೆಗೆ ಬರುವ ವಾಹನಗಳನ್ನು ಮಲ್ಯ ಆಸ್ಪತ್ರೆ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆಯ ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಆವರಣ ಮತ್ತು ಯುಬಿ ಸಿಟಿ ಸುತ್ತಮುತ್ತಲಿನ ಆವರಣದಲ್ಲಿ, ಶಿವಾಜಿನಗರ ಬಸ್ ಸ್ಟ್ಯಾಂಡ್ ಮೊದಲ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಸಿ.ಎ ಸದಸ್ಯರ ವಾಹನವನ್ನು ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ : ಕೆರೆಬಿಯನ್ ಲೀಗ್ ಮಹಿಳಾ ಟೀಂ ಖರೀದಿಸಿದ ಶಾರುಖ್ ಖಾನ್