ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಕಾರಣದಿಂದ ನಗರದ ಹೆಚ್ಚಿನ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಹಲವು ಖಾಸಗಿ ಆಸ್ಪತ್ರೆಗಳ ಹೆರಿಗೆ ವಾರ್ಡ್ಗಳನ್ನೂ ಮುಚ್ಚಲಾಗಿದೆ. ಇನ್ನು ಕೆಲ ಆಸ್ಪತ್ರೆಗಳ ಹೆರಿಗೆ ವಾರ್ಡ್ಗಳಲ್ಲಿ ಕೊರೊನಾ ರೋಗಿಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ಪಾಲಿಕೆಯ ಹೆರಿಗೆ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ತಿಂಗಳು 1,500 ಗರ್ಭಿಣಿಯರು ಈ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಶ್ರೀರಾಂಪುರ ಹೆರಿಗೆ ಆಸ್ಪತ್ರೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಕೆ.ಸಿ. ಜನರಲ್ ಆಸ್ಪತ್ರೆ, ಜೆ.ಜೆ. ಆರ್ ನಗರ, ಹೊಸಹಳ್ಳಿಗಳಿಂದಲೂ ಇಲ್ಲಿಗೆ ಜನ ಬರುತ್ತಾರೆ. ಕಾರ್ಮಿಕರು ಬಂದರೂ ಕೂಡಲೇ ಆಂಟಿಜನ್ ಟೆಸ್ಟ್ ಮಾಡಿಸಿ, ದಾಖಲು ಮಾಡಿಕೊಳ್ಳಲಾಗುತ್ತಿದೆ. ಯಾರಿಗೂ ಕೂಡ ಚಿಕಿತ್ಸೆ ನಿರಾಕರಿಸುತ್ತಿಲ್ಲ. ಇದರಿಂದ ಜೂನ್ ತಿಂಗಳಲ್ಲಿ 200 ಹಾಗೂ ಜುಲೈ ತಿಂಗಳ ಇಲ್ಲಿಯವರೆಗೆ 150 ಗರ್ಭಿಣಿಯರು ಹೆರಿಗೆ ಮಾಡಿಸಿಕೊಂಡಿದ್ದಾರೆ ಎಂದು ಶ್ರೀರಾಂಪುರ ಆಸ್ಪತ್ರೆಯ ಮುಖ್ಯ ವೈದ್ಯೆ ಡಾ. ಫಾತಿಮಾ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 26 ಹೆರಿಗೆ ಆಸ್ಪತ್ರೆಗಳಿದ್ದು, ಏಪ್ರಿಲ್ನಿಂದ ಈ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರ ಸಂಖ್ಯೆ ಏರಿಕೆಯಾಗಿದೆ. ಮೂರು ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಲಾಗಿದೆ. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯನ್ನು ಕೊರೊನಾ ಸೋಂಕಿತ ಹಾಗೂ ಶಂಕಿತರ ಹೆರಿಗೆಗೆ ಮೀಸಲಿಡಲಾಗಿದ್ದು, ಶಂಕಿತರು ಬಂದರೆ ವೈದ್ಯರು ಹಾಗೂ ಶುಶ್ರೂಷಕಿಯರು ಪಿಪಿಇ ಕಿಟ್ ಧರಿಸಿ ಹೆರಿಗೆ ಮಾಡಿಸುತ್ತಿದ್ದಾರೆ. ಹಲವೆಡೆ ಹದಿನೈದು ದಿನದ ಮೊದಲೇ ಕೊರೊನಾ ಸೋಂಕು ಪರೀಕ್ಷೆ ನಡೆಸಿ, ಸೋಂಕು ಇದ್ದರೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ತಡವಾಗಿ ಗೊತ್ತಾದರೆ, ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.