ಬೆಂಗಳೂರು: ಜಗದೀಶ್ ಶೆಟ್ಟರ್ ಸಂಪುಟ ಸೇರದಿರುವ ವಿಷಯ ಸೇರಿದಂತೆ ಸಚಿವ ಸಂಪುಟ ರಚನೆ ವಿಷಯದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಗಣೇಶ ಚುತುರ್ಥಿ ನಂತರ ರಾಜ್ಯ ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುವ ಕೆಲಸ ಆರಂಭಿಸಲಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಬಳಿಕ ಮೊದಲ ಬಾರಿ ಆರ್.ಎಸ್.ಎಸ್ ಕಚೇರಿ ಕೇಶವಕೃಪಾಗೆ ಯಡಿಯೂರಪ್ಪ ಭೇಟಿ ನೀಡಿದರು. ಸಂಘದ ಪ್ರಮುಖ್ ಮುಕುಂದ್ ಸೇರಿದಂತೆ ಸಂಘ ಪರಿವಾರದ ಮುಖಂಡರ ಜೊತೆ ಮಹತ್ವದ ವಿಚಾರಗಳ ಬಗ್ಗೆ ಅವರು ಚರ್ಚೆ ನಡೆಸಿದರು. ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಕೇಶವಕೃಪಗೆ ಬಿಜೆಪಿ ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗಮಿಸಿದರು.
ನಂತರ ಮಾತನಾಡಿದ ಬಿಎಸ್ವೈ, ಗಣೇಶ ಹಬ್ಬದ ಬಳಿಕ ವಾರಕ್ಕೊಮ್ಮೆ ಪ್ರತಿ ಜಿಲ್ಲೆಗೆ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಅಧಿಕಾರ, ಸ್ಥಾನಮಾನ ಇಲ್ಲದೆಯೂ ಕೆಲಸ ಮಾಡಬಹುದು ಎಂದು ತೋರಿಸಬೇಕು ಅಂದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ ಸಂಘಟನೆ ಬಲಗೊಳಿಸುತ್ತೇನೆ. ನಾಳೆ ಗುಂಡ್ಲುಪೇಟೆಗೆ ಹೋಗಿ ರವಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದರು.
'ಯುವಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಶೆಟ್ಟರ್ ಹೇಳಿದ್ದಾರೆ'
ಸಂಪುಟ ತೀರ್ಮಾನ ಅತ್ಯಂತ ಒಳ್ಳೆಯ ನಿರ್ಧಾರವಾಗಿದೆ. ಸಚಿವ ಸಂಪುಟ ರಚನೆ ಸಿಎಂ ಬೊಮ್ಮಾಯಿಯವರದ್ದು. ಶೆಟ್ಟರ್ ನನ್ನ ಬಳಿ ಬಂದು ಮಾತಾಡಿದ್ದಾರೆ, ಯುವಕರಿಗೆ ಅವಕಾಶ ಮಾಡಿಕೊಡಬೇಕು ಅದಕ್ಕೆ ನಾನು ಸಂಪುಟ ಸೇರುವುದಿಲ್ಲ ಅಂತಾ ಹೇಳಿದ್ದಾರೆ. ನಾನು ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದರು.
ವಲಸೆ ಶಾಸಕರನ್ನು ಸಚಿವರನ್ನಾಗಿ ಮುಂದುವರಿಸುವ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಯಾರನ್ನು ಸಂಪುಟಕ್ಕೆ ತಗೋಬೇಕು ಅಂತಾ ಬೊಮ್ಮಾಯಿಯವರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ನಾಳೆ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ, ನಾನು ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ, ಏನೇ ಇದ್ದರೂ ಮುಖ್ಯಮಂತ್ರಿ ಬಳಿ ಹೋಗಿ ಮಾತನಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.