ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ರೈಲು ದುರಂತದ ಸಂದರ್ಭದಲ್ಲಿ ನಿರ್ವಹಣೆ ಮಾಡುವ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳಗಳು ಅಣುಕು ಕಾರ್ಯಾಚರಣೆ ಮಾಡಿವೆ.
ಅಣುಕು ಪ್ರದರ್ಶನದಲ್ಲಿ ಎರಡು ಕೋಚ್‌ಗಳನ್ನು ಸ್ಥಾನಪಲ್ಲಟಗೊಳಿಸಿ, ದುರ್ಘಟನೆ ಸನ್ನಿವೇಶವನ್ನು ಕೃತಕವಾಗಿ ಸೃಷ್ಟಿಸಲಾಯಿತು. ನಂತರ ಸೈರನ್ ಮೂಲಕ ಸುದ್ದಿಹಬ್ಬಿಸಿ, ಸ್ಥಳಕ್ಕೆ ಎನ್‌ಡಿಆರ್ ಎಫ್ ಹಾಗೂ ಎಸ್‌ಡಿಆರ್‌ಎಫ್ ಧಾವಿಸಿತು. ಹಾನಿಯಾಗಿದ್ದ ಕೋಚ್‌ಗಳಲ್ಲಿದ್ದ ಗಾಯಾಳುಗಳನ್ನು ರಕ್ಷಿಸುವ ಅಣುಕು ಮಾಡಲಾಯಿತು.
ಈ ವೇಳೆ ತಂಡವು ವಿವಿಧ ಉಪಕರಣಗಳಿಂದ ರೈಲಿನ ಸರಳುಗಳನ್ನು ಕತ್ತರಿಸುವುದು, ಗಾಯಾಳುಗಳನ್ನು ಹೊರಗೆ ತರುವುದು, ಹೊರಗೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ರೈಲ್ವೇ ಸುರಕ್ಷತಾ ದಳ ನೋಡಿಕೊಳ್ಳುವುದು, ಗಾಯಾಳುಗಳನ್ನು ಸ್ಟ್ರೆಚರ್ ಮೂಲಕ ವೈದ್ಯಕೀಯ ಕ್ಯಾಂಪ್‌ಗಳಿಗೆ ಕೊಂಡೊಯ್ಯುವುದು, ಕೆಲವರನ್ನು ಆ್ಯಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕಳಿಸಲಾಯಿತು. ಸುಮಾರು 45 ನಿಮಿಷಗಳ ಕಾಲ ಈ ಅಣಕು ರಕ್ಷಣಾ ಕಾರ್ಯ ನಡೆಯಿತು. ಬಳಿಕ ಕೋಚ್‌ಗಳನ್ನು ಪುನಃ ಹಳಿಯ ಮೇಲಿರಿಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಉಪ ಕಮಾಂಡರ್ ಸೆಂಥಿಲ್ ಕುಮಾರ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳದ ನಿರೀಕ್ಷಕ ಪ್ರಶಾಂತ್ ತಮ್ಮ ತಂಡದೊಂದಿಗೆ ಅಣುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.