ಬೆಂಗಳೂರು: ತೋಟಗಾರಿಕೆ ಬೆಳೆಗಾರರಿಗೆ ಹಾಗೂ ರೈತ ಉತ್ಪಾದಕ ಸಂಘದ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ನೀರಾವರಿ ಹೊಂದಿರುವ ಹಾಗೂ ತೋಟಗಾರಿಕೆ ಮಾಡಲಿಚ್ಚಿಸುವ ರೈತರಿಗೆ ವಿವಿಧ ಘಟಕಗಳ ನಿರ್ಮಾಣಕ್ಕೆ ಸಹಾಯಧನ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ.
ಮಳೆ ನೀರು ಸಂರಕ್ಷಿಸಿ ಅದರ ಮೂಲಕ ತೋಟಗಾರಿಕೆ ಬೆಳೆಗೆ ಪ್ರೋತ್ಸಾಹಿಸಲು ಸರ್ಕಾರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ.
ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದ್ದು, ಈಗಾಗಲೇ ಈ ಯೋಜನೆಯಡಿ ಹಲವಾರು ರೈತರು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಸಿಗುವ ಸಬ್ಸಿಡಿ ಎಷ್ಟು? ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗಕ್ಕೆ ಶೇ.40 ರಷ್ಟು ಸಬ್ಸಿಡಿ ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.50 ರಷ್ಟು ಸಹಾಯಧನ ದೊರೆಯುತ್ತದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಣ್ಣಿನ ಬೆಳೆಗಳಾದ ಬಾಳೆ, ದ್ರಾಕ್ಷಿ, ಮಾವು, ದಾಳಿಂಬೆ, ಡ್ರ್ಯಾಗನ್ ಫ್ರೂಟ್ಸ್ ಸೇರಿದಂತೆ ಇನ್ನಿತರ ಹಣ್ಣುಗಳ ಪ್ರದೇಶ ವಿಸ್ತರಣೆ, ಪಾಲಿಹೌಸ್, ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ, ಅರಿಶಿಣ ಸಂಸ್ಕರಣಾ ಘಟಕ, ಕೃಷಿಹೊಂಡ, ಹೂವಿನ ಪ್ರದೇಶ ವಿಸ್ತರಣೆ, ಹಣ್ಣು ಮಾಗಿಸುವ ಘಟಕ, ಜೇನು ಕೃಷಿ, ಹಸಿರು ಮನೆ ಘಟಕಕ್ಕೆ ಸಹಾಯಧನ ಸಿಗುತ್ತದೆ.
ಹೂವು, ಹಣ್ಣುಗಳ ಘಟಕ ನಿರ್ಮಾಣಕ್ಕೂ ಸಬ್ಸಿಡಿ.. ಸಣ್ಣ ನರ್ಸರಿ ಸ್ಥಾಪನೆ, ಮಾವು, ಬಾಳೆ, ಗುಲಾಬಿ, ಸುಗಂಧರಾಜ, ಚೆಂಡು ಹೂವು, ಸೇವಂತಿಗೆ, ತರಕಾರಿಗಳ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ (ಹಸಿರುಮನೆ, ನೆರಳು ಪರದೆ, ಪ್ಲಾಸ್ಟಿಕ್ ಮಂಚಿಂಗ್), ಕೊಯ್ಲೋತ್ತರ ನಿರ್ವಹಣೆ ಅಡಿ ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ ಹಾಗೂ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗಾಗಿ ತಳ್ಳುಗಾಡಿ ಘಟಕಗಳಿಗೆ ಸಹಾಯಧನ ಸೌಲಭ್ಯ ಸಿಗಲಿದೆ.
ಸಬ್ಸಿಡಿ ಪಡೆಯಲು ಮಾನದಂಡಗಳೇನು? ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ರೈತರು ಸ್ವಂತ ಜಮೀನು ಹಾಗೂ ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿ ಬರೆದು ಅದರಲ್ಲಿ ಮೊಬೈಲ್ ನಂಬರ್ ನಮೂದಿಸಬೇಕು. ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಹಾಗೂ ಫೋಟೋ ಹೊಂದಿರಬೇಕು.
ಈ ಎಲ್ಲಾ ದಾಖಲೆಗಳೊಂದಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಪುಣೇರಿ ವಿರುದ್ಧ ಸೋಲು... 35-37 ಅಂತರದಿಂದ ಪಂದ್ಯ ಕೈಚೆಲ್ಲಿದ ಬೆಂಗಳೂರು ಬುಲ್ಸ್