ಬೆಂಗಳೂರು : ನನಗೆ ರಾಗಿಣಿನೂ ಗೊತ್ತಿಲ್ಲ, ಯಾವ ಸಂಜನಾನೂ ಗೊತ್ತಿಲ್ಲ. ನನ್ನ ಮನೆಯ ಶ್ರೀಮತಿ ಬಿಟ್ಟು ನನಗೆ ಯಾರೂ ಗೊತ್ತಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ನಗೆ ಚಟಾಕಿ ಹಾರಿಸಿದ್ದಾರೆ.
ವಿಕಾಸಸೌಧದಲ್ಲಿಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಿನಿಮಾ ನೋಡಿಯೇ 25 ವರ್ಷ ಆಯ್ತು. ನನ್ನ ಪತ್ನಿ ಜೊತೆ ಉಮಾ ಟಾಕೀಸ್ನಲ್ಲಿ 'ಬಂಧನ' ಸಿನಿಮಾ ನೋಡಿದ್ದೆ. ಆಗಲೂ ಸಿನಿಮಾ ನೋಡುವಾಗ ನಾನು ಮಲಗಿಕೊಂಡಿದ್ದೆ. ನನಗೆ ರಾಗಿಣಿನೂ ಗೊತ್ತಿಲ್ಲ, ಯಾವ ಸಂಜನಾನೂ ಗೊತ್ತಿಲ್ಲ. ನನ್ನ ಮನೆಯ ಶ್ರೀಮತಿ ಬಿಟ್ಟು ನನಗೆ ಯಾರೂ ಗೊತ್ತಿಲ್ಲ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಅವರ ಹೆಸರು ತಳುಕು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹಮ್ಮದ್ ಅವರೇನು ದಡ್ಡರಲ್ಲ. ಆದರೆ, ಯಾರೇ ತಪ್ಪು ಮಾಡಿದ್ರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ತಪ್ಪು ಮಾಡಿದವರು ಪ್ರಪಂಚದಲ್ಲಿ ಬದುಕಲು ಸಾಧ್ಯವಿಲ್ಲ. ಪೊಲೀಸರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಯಾವ ರಾಜಕಾರಣಿ ಮಕ್ಕಳು ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ನನ್ನ ಮಗ ತಪ್ಪು ಮಾಡಿದ್ರೂ ಶಿಕ್ಷೆಯಾಗಲಿ. ಯಾರು ಎಷ್ಟೇ ದೊಡ್ಡವರಾದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದರು.
ಸಿಎಂ ಪುತ್ರ ವಿಜಯೇಂದ್ರ ಅವರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಈ ರಾಜ್ಯಕ್ಕೆ ಯಡಿಯೂರಪ್ಪನವರ 50 ವರ್ಷದ ಕೊಡುಗೆಯಿದೆ. ಯಡಿಯೂರಪ್ಪ ಮಗನಾಗಲು ವಿಜಯೇಂದ್ರ ಅರ್ಜಿ ಹಾಕಿಕೊಂಡಿರಲಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡೋದು ಬೇಡ. ಯಾವ ರಾಜಕಾರಣಿ ಮಕ್ಕಳು ದೇವರ ಹತ್ತಿರ ಹೋಗಿ ಕೇಳಿಕೊಂಡು ಬಂದಿಲ್ಲ. ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಕಲ್ಲು ಹೊಡೆಯುವ ಕೆಲಸ ಯಾರೂ ಮಾಡಬಾರದು. ನಾನು ಈ ಬಗ್ಗೆ ಏನು ಮಾತನಾಡಲ್ಲ ಎಂದು ಕೈಮುಗಿದರು.