ಬೆಂಗಳೂರು : ಲಾಕ್ಡೌನ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಜೂನ್ 14ರಿಂದ ಅದು ಜಾರಿಗೆ ಬರಲಿದೆ. ಆದರೆ, ಇಂದೇ ಜನರು ಸಡಿಲಿಕೆ ಜಾರಿಯಾಗಿರುವಂತೆ ಸಂಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಬಾರದು ಎಂದು ಜನತೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಪ್ರಾರಂಭ ಮಾಡುವ ಸಲುವಾಗಿ ಕೆಲವು ರಿಯಾಯಿತಿಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಎಲ್ಲಾ ತರದ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶೇ.50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆ ಮಾಲೀಕರೇ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು. ನಿಮ್ಮ ನಿಮ್ಮ ನೌಕರರಿಗೆ ವ್ಯಾಕ್ಸಿನೇಷನ್ ಮಾಡಲು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಅಗತ್ಯ ವಸ್ತುಗಳ ಖರೀದಿ ಸಮಯವನ್ನ ವಿಸ್ತರಿಸಲಾಗಿದೆ. ಬೆಳಗ್ಗೆ 6ರಿಂದ 10ರ ಬದಲು 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಯ ವಿಸ್ತರಣೆ ಮಾಡಲಾಗಿದೆ. ಜನಸಂದಣಿ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಇದರಿಂದ ಅನುಕೂಲವಾಗಲಿದೆ. ಶಾಲಾ-ಕಾಲೇಜು, ಮಾಲ್, ರೆಸ್ಟೋರೆಂಟ್ ಸೇರಿ ಜನಸಂದಣಿ ಇರುವ ಕಡೆ ಯಾವುದೇ ಅವಕಾಶಗಳನ್ನು ಕೊಟ್ಟಿಲ್ಲ. ಸಮಾರಂಭಗಳನ್ನು ಮಾಡಲು ಅವಕಾಶ ನೀಡಿಲ್ಲ. ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಮುಂದುವರೆಸಲಾಗಿದೆ ಎಂದರು.
ಇದನ್ನೂ ಓದಿ: ನಟಿ ಊರ್ವಶಿ ಹೊಟ್ಟೆಗೆ ಪಂಚ್ ನೀಡುವ ಜಿಮ್ ಟ್ರೇನರ್: ಬಾಲಿವುಡ್ ಬೆಡಗಿಯ ಔಟ್ಫಿಟ್ಗೆ ನೆಟ್ಟಿಗರು ಫಿದಾ
ಸಾರ್ವಜನಿಕರು ಇಂದಿನಿಂದಲೇ ನಿರ್ಬಂಧ ಸಡಿಲಿಕೆ ಎಂದುಕೊಂಡಿದ್ದಾರೆ. ಆದರೆ, ಇದು ಜೂನ್ 14ರಿಂದ ಜಾರಿಗೆ ಬರಲಿದೆ. ಇಂದೇ ನಮಗೆ ಅವಕಾಶವಿದೆಯೆಂದು ಕೆಲವರು ಓಡಾಡುತ್ತಿದ್ದಾರೆ. ಇದು ಸರಿಯಲ್ಲ, ಇನ್ನೂ ಎರಡು-ಮೂರು ದಿನ ಲಾಕ್ಡೌನ್ ಸಂಪೂರ್ಣ ಇರಲಿದೆ. ಚಾಚೂ ತಪ್ಪದೆ ಜನರು ಪಾಲನೆ ಮಾಡಬೇಕು. ಒಂದೇ ಬಾರಿಗೆ ರಸ್ತೆಗಿಳಿಯುವುದನ್ನು ತಪ್ಪಿಸಲು ನಮ್ಮ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಅನಗತ್ಯ ರಸ್ತೆಗಿಳಿದು ನಮ್ಮ ಪೊಲೀಸ್ ಪಡೆಯನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಬಾರದೆಂದು ಮನವಿ ಮಾಡಿದರು.
'ಡಿಸಿಎಂ ಅಂಕಿ-ಸಂಖ್ಯೆಗಳನ್ನು ಮರೆಮಾಚಿಲ್ಲ ಎಂದಿದ್ದಾರೆ'
ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಸದ್ಯ ಜೂನ್ 21ರವರೆಗೆ ಇರಲಿದೆ. ಕೊರೊನಾ ಪರಿಸ್ಥಿತಿ ಅವಲೋಕನ ಮಾಡಿ ಇದನ್ನು ವಿಸ್ತರಣೆ ಮಾಡಬೇಕೋ?, ಬೇಡವೋ? ಎನ್ನುವುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ನಮ್ಮ ರಾಜ್ಯದಲ್ಲಿ ಎಲ್ಲಿಯೂ ಸಾವಿನ ಸಂಖ್ಯೆಯನ್ನು ಮರೆಮಾಚಿ ಅಂಕಿ-ಸಂಖ್ಯೆಗಳನ್ನು ತೋರಿಸುವ ಕೆಲಸ ನಡೆದಿಲ್ಲ. ದಾಖಲೆ ಸರಿಯಾಗಿದೆ ಎನ್ನುವುದು ನಮ್ಮ ಭಾವನೆ. ಇದರ ಬಗ್ಗೆ ಉಪಮುಖ್ಯಮಂತ್ರಿಗಳು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನನ್ನ ಬಳಿ ಇಲ್ಲ ಎಂದರು.
ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಬೇಕು ಎಂದರೆ ವಲಸಿಗರು ಬರಲೇಬೇಕು. ಅವರು ಮರಳಿ ಬಂದರೆ ಸೋಂಕು ಹೆಚ್ಚಲಿದೆ ಎನ್ನುವ ಆತಂಕ ಇದೆ. ಹಾಗಾಗಿ, ರೈಲು, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಆ್ಯಂಟಿಜೆನ್ ತಪಾಸಣೆ ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಪ್ರಯತ್ನ ಮಾಡಲಿದ್ದೇವೆ ಎಂದರು.
'ಕಾಂಗ್ರೆಸ್ನಿಂದ ನಕಾರಾತ್ಮಕ ರಾಜಕೀಯ'
ಕಾಂಗ್ರೆಸ್ ಒಂದು ರೀತಿಯಲ್ಲಿ ಎಲ್ಲವನ್ನೂ ಉಲ್ಲಂಘನೆ ಮಾಡುವ ಪ್ರವೃತ್ತಿ ಮಾಡುತ್ತಿದೆ. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಎಂದರೆ ಯಾಕೆ ಹಾಕಿಸಿಕೊಳ್ಳಬೇಕು? ಮೊದಲು ಮೋದಿ ಹಾಕಿಸಿಕೊಳ್ಳಲಿ ಎನ್ನುತ್ತಿದ್ದರು. ಈಗ ವ್ಯಾಕ್ಸಿನ್ ಎಲ್ಲಿ ಎಂದು ಕೇಳುತ್ತಿದ್ದಾರೆ. ಈಗ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲದೆ ಇದ್ದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಅವರು ನಕಾರಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.