ಬೆಂಗಳೂರು: ಒಳಚರಂಡಿ ನೀರಿನಿಂದಾಗಿ ಮಲಿನಗೊಂಡಿರುವ ಕೊಡಗು ಜಿಲ್ಲೆಯ ಭಾಗಮಂಡಲದ ಕಾವೇರಿ ನದಿಪಾತ್ರವನ್ನು ಸ್ವಚ್ಛಗೊಳಿಸುವಂತೆ ಹೈಕೋರ್ಟ್ ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಆದೇಶಿಸಿದೆ. ಭಾಗಮಂಡಲದಲ್ಲಿ ಕಾವೇರಿ ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದನ್ನು ತಡೆಗಟ್ಟಲು ಕೋರಿ ಸ್ಥಳೀಯ ನಿವಾಸಿ ಎಸ್.ಇ ಜಯಂತ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಓದಿ: ಬರಿದಾಗುತ್ತಿರುವ ಕಾವೇರಿ ಒಡಲು : ಕೊಡಗಿನಲ್ಲಿ ಜಲಕ್ಷಾಮ ಭೀತಿ?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾವೇರಿ ಮತ್ತು ಕನ್ನಿಕೆ ನದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಗುತ್ತಿಗೆದಾರರು ಮೈಸೂರಿನಲ್ಲಿ ಇರುತ್ತಾರೆ. ಸದ್ಯ ಕಾವೇರಿ ಮತ್ತು ಕನ್ನಿಕೆ ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಅದನ್ನು ತಪ್ಪಿಸಬೇಕು ಹಾಗೂ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ, ಒಳಚರಂಡಿ ನೀರು ಹರಿಯುತ್ತಿರುವುದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪೀಠಕ್ಕೆ ಸಲ್ಲಿಸಿದ್ದರು.
ಓದಿ: ಸಿಲಿಕಾನ್ ಸಿಟಿಯ 172 ಬಡಾವಣೆಗಳಲ್ಲಿ ಕಾವೇರಿ ನೀರು ಸರಬರಾಜು ಬಂದ್
ಫೋಟೋಗಳನ್ನು ಪರಿಶೀಲಿಸಿದ ಪೀಠ, ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸದ್ಯದಲ್ಲೇ ಮುಂಗಾರು ಆರಂಭವಾಗಲಿದೆ. ಹೀಗಾಗಿ, ಕೂಡಲೇ ನದಿಗೆ ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಲು ಹಾಗೂ ನದಿಪಾತ್ರವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕು. ಕಾವೇರಿ ಮತ್ತು ಕನ್ನಿಕೆ ನದಿಗಳ ಪುನರುಜ್ಜೀವನ ಮತ್ತು ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು, ಸಂಬಂಧಪಟ್ಟ ಇತರೆ ಪ್ರಾಧಿಕಾರಗಳ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನದಿಪಾತ್ರವನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 2ನೇ ವಾರಕ್ಕೆ ಮುಂದೂಡಿತು.