ಬೆಂಗಳೂರು: ಐದು ವರ್ಷಗಳ ಕಾನೂನು ಪದವಿಯ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಫ್ಲೈನ್ ಪರೀಕ್ಷೆ ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ವಿಶ್ವವಿದ್ಯಾಲಯದ ಅಧಿಸೂಚನೆ ರದ್ದು ಕೋರಿ ಬಿ. ರಿತ್ವಿಕ್ ಬಾಲನಾಗರಾಜ್ ಸೇರಿ 41 ಮಂದಿ 5 ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಐದು ವರ್ಷ ಕಾನೂನು ಪದವಿಯ ಎಂಟು ಸೆಮಿಸ್ಟರ್‌ನಲ್ಲಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾದವರು ಮಾತ್ರ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಿ 2020ರ ನ.1ರಂದು ಭಾರತೀಯ ವಕೀಲರ ಪರಿಷತ್ (ಬಿಸಿಐ) ಪ್ರಕಟಣೆ ಹೊರಡಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕಳೆದ ವರ್ಷ 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಪರೀಕ್ಷೆಗಳನ್ನು ಫೆ.15ರಿಂದ ನಡೆಸಲು ವೇಳಾಪಟ್ಟಿ ನಿಗದಿಪಡಿಸಿ 2021ರ ಜ.13 ಮತ್ತು ಜ.29ರಂದು ಕೆಎಸ್‌ಎಲ್‌ಯು ಅಧಿಸೂಚನೆ ಹೊರಡಿಸಿತ್ತು. ಇದೀಗ ಬಿಸಿಐ ಪ್ರಕಟಣೆ ಮತ್ತು ಕೆಎಸ್‌ಎಲ್‌ಯು ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದನ್ನೂ ಓದಿ...ಧಾರ್ಮಿಕ ಕೇಂದ್ರಗಳಿಂದ ಶಬ್ಧ ಮಾಲಿನ್ಯ.. ಮಾರ್ಗಸೂಚಿ ಜಾರಿಗೆ ಹೈಕೋರ್ಟ್ ಕಡೆಯ ಅವಕಾಶ
ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿಗಳ ಮೇಲೆ ಮಧ್ಯಂತರ ಪರೀಕ್ಷೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಕೆಎಸ್‌ಎಲ್‌ಯು ಯಾವುದೇ ತಜ್ಞರ ಅಭಿಪ್ರಾಯ ಆಧರಿಸಿ ಪರೀಕ್ಷೆ ನಡೆಸಲು ನಿರ್ಧರಿಸಿಲ್ಲ. ಆದ್ದರಿಂದ ಈಗಾಗಲೇ ನಿಗದಿಪಡಿಸಿರುವ ಒಂದರಿಂದ ನಾಲ್ಕನೇ ವರ್ಷದ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗುತ್ತದೆ.
ಅಲ್ಲದೆ, ಐದು ವರ್ಷದ ಕಾನೂನು ಪದವಿಯ 1ರಿಂದ ಮತ್ತು 4ನೇ ವರ್ಷದ ವಿದ್ಯಾರ್ಥಿಗಳ ಸಂಬಂಧ ಪ್ರಸ್ತಕ ಶೈಕ್ಷಣಿಕ ವರ್ಷದ 1, 3, 5 ಮತ್ತು 7ನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಹೊಸದಾಗಿ ವೇಳಾಪಟ್ಟಿ ಪ್ರಕಟಿಸಬೇಕು. ಹಿಂದಿನ ಶೈಕ್ಷಣಿಕ ವರ್ಷದ 2, 4, 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳಲ್ಲಿ ಶೇ.50 ಮತ್ತು 1, 3, 5ನೇ ಸೆಮಿಸ್ಟರ್‌ನಲ್ಲಿ ಅವರು ಪಡೆದಿರುವ ಅಂಕಗಳಲ್ಲಿ ಶೇ.50ರಷ್ಟು ಆಧಾರದ ಮೇಲೆ ಅಂಕಪಟ್ಟಿ ನೀಡಬೇಕು ಎಂದು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಆದೇಶಿಸಿದೆ.
ವಿದ್ಯಾರ್ಥಿಗಳ ಕೋರಿಕೆ: ಕೊರೊನಾ ಸೋಂಕು ವ್ಯಾಪಿಸಿ, ಲಾಕ್ಡೌನ್ ಜಾರಿ ಮಾಡಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಜೊತೆಗೆ ಇಂಟರ್ನೆಟ್, ಮೊಬೈಲ್, ಲ್ಯಾಪ್ಟಾಪ್ಗಳ ಕೊರತೆಯಿಂದಾಗಿಯೂ ಕೆಲವರಿಗೆ ಪಾಠ ಕೇಳಲು ಸಾಧ್ಯವಾಗಿಲ್ಲ.
ಈಗಾಗಲೇ ಶೈಕ್ಷಣಿಕ ವರ್ಷ ವಿಳಂಬವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಹೋದರೆ ಪ್ರಸಕ್ತ ಶೈಕ್ಷಣಿಕ ವರ್ಷ ಹಾಳಾಗುತ್ತದೆ. ಹೀಗಾಗಿ, ಯುಜಿಸಿ ನಿರ್ದೇಶನದಂತೆ ಮಧ್ಯಂತರ ಸೆಮಿಸ್ಟರ್ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪಾಸು ಮಾಡಬೇಕು ಎಂದು ಅರ್ಜಿದಾರ ವಿದ್ಯಾರ್ಥಿಗಳು ಮನವಿ ಮಾಡಿದ್ದರು.