ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ವಿಳಂಬ ಮಾಡುತ್ತಿರುವ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ತಡ ಮಾಡುವುದನ್ನು ಸಹಿಸಲಾಗದು ಎಂದಿದೆ.
ಬಿಬಿಎಂಪಿ ಇಂಜಿನಿಯರ್ಗಳು ಉದ್ದೇಶಪೂರ್ವಕವಾಗಿಯೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ ನಡೆದುಕೊಂಡರೆ ಬಿಬಿಎಂಪಿ ಇಂಜಿನಿಯರ್ಗಳನ್ನೇ ಬದಲಿಸಲು ಸರ್ಕಾರಕ್ಕೆ ಸೂಚಿಸುತ್ತೇವೆ ಎಂದು ಹೈಕೋರ್ಟ್ ಪಾಲಿಕೆ ವಿರುದ್ಧ ಗುಡುಗಿದೆ.
ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ 2015ರಲ್ಲಿ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ಧ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪಾಲಿಕೆ ಎಂಜಿನಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೀಠ, ರಸ್ತೆ ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ. ಬಿಬಿಎಂಪಿ ಏಕೆ ಇನ್ನೂ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಿಲ್ಲ?, ಉದ್ದೇಶಪೂರ್ವಕವಾಗಿಯೇ ಬಿಬಿಎಂಪಿ ಇಂಜಿನಿಯರ್ಗಳು ಹೀಗೆ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ನೀಡಿದರೂ ರಸ್ತೆ ಸರಿಯಾಗುತ್ತಿಲ್ಲ. ಇದೇ ರೀತಿ ನಡೆದುಕೊಂಡರೆ ಬಿಬಿಎಂಪಿ ಇಂಜಿನಿಯರ್ಗಳನ್ನೇ ಬದಲಿಸಲು ಸರ್ಕಾರಕ್ಕೆ ಸೂಚಿಸುತ್ತೇವೆ ಎಂದು ಪೀಠ ಎಚ್ಚರಿಕೆ ನೀಡಿತು.
ವಿಚಾರಣೆ ವೇಳೆ ಹಾಜರಿದ್ದ ಪಾಲಿಕೆ ಮುಖ್ಯ ಆಯುಕ್ತರು ಪೀಠಕ್ಕೆ ಮನವಿ ಮಾಡಿ, ಹೈಕೋರ್ಟ್ ಆದೇಶದಂತೆ ತ್ವರಿತವಾಗಿ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ. ರಸ್ತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಸದ್ಯ ನಗರದ 182 ರಸ್ತೆಗಳನ್ನು ಪೈಥಾನ್ ಯಂತ್ರ ಬಳಸಿ ರಿಪೇರಿ ಮಾಡುತ್ತಿದ್ದೇವೆ. ಸಂಚಾರ ದಟ್ಟಣೆ ಹೆಚ್ಚಿರುವೆಡೆ ಪೈಥಾನ್ ಯಂತ್ರ ಬಳಸುತ್ತಿದ್ದೇವೆ. ಹೊಸ ಟೆಂಡರ್ಗೆ ಯಾರೂ ಬಿಡ್ ಸಲ್ಲಿಸಿಲ್ಲ. ಹೀಗಾಗಿ, ಪೈಥಾನ್ ಯಂತ್ರಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ನನ್ನನ್ನು ನೀರಾವರಿ ಸಚಿವ, ಗೃಹ ಸಚಿವ ಈಗ ಸಿಎಂ ಮಾಡಿದ್ದು ಯಡಿಯೂರಪ್ಪನವರು : ಸಿಎಂ ಬೊಮ್ಮಾಯಿ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಸ್ತೆ ಗುಂಡಿ ಮುಚ್ಚಲು ಉತ್ತಮ ತಂತ್ರಜ್ಞಾನ ಬಳಸಿ. ಬರೀ ಕಣ್ಣೊರೆಸುವ ತಂತ್ರ ಇಲ್ಲಿ ನಡೆಯುವುದಿಲ್ಲ. ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ಬೇಕು. ಪೈಥಾನ್ ಯಂತ್ರ ಬಳಕೆಗೆ ಸಂಬಂಧಿಸಿದಂತೆ ಮಾರ್ಚ್ 15ರೊಳಗೆ ಕ್ರಿಯಾ ಯೋಜನೆ ಸಲ್ಲಿಸಿ ಎಂದು ಸೂಚನೆ ನೀಡಿ, ವಿಚಾರಣೆ ಮುಂದೂಡಿತು.