ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಕಳೆದ ಭಾನುವಾರ (ಫೆ.21) ರಂದು ನಡೆದ ಸಮಾವೇಶದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಪ್ರವರ್ಗ 2ಎ ಗೆ ಸೇರಿಸಲು ಆಗ್ರಹಿಸಿ ಕಳೆದ ಭಾನುವಾರ ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ದ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಪೀಠ, ಕ್ರಮ ಕೈಗೊಳ್ಳುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಈ ವೇಳೆ, ಭಾರತೀಯ ಜನತಾ ಪಕ್ಷದ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕಳೆದ ಫೆ.26ರಂದು ಬಿಜೆಪಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತಾವು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿಲ್ಲ. ಈವರೆಗೆ ಯಾವುದೇ ರ‍್ಯಾಲಿ, ಸಾರ್ವಜನಿಕ ಸಭೆ, ರೋಡ್ ಶೋ ನಡೆಸಿಲ್ಲ ಎಂದಿದೆ. ಇದು ಒಪ್ಪುವಂತಹ ವಿಚಾರವಲ್ಲ ಎಂದು ಆಕ್ಷೇಪಿಸಿತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವುದಾಗಿ ಪಕ್ಷದ ಪರ ವಕೀಲರು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಈ ಸಂಬಂಧ ಒಂದು ವಾರದಲ್ಲಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿತು. ಇನ್ನು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅಡಿ ಕ್ರಮ ಜರುಗಿಸುವ ಸಂಬಂಧ ರೂಪಿಸಿರುವ ನಿಯಮಗಳ ಕುರಿತು ಮಾಹಿತಿ ನೀಡುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.