ಬೆಂಗಳೂರು: ನಗರದ ಅಲಯನ್ಸ್ ವಿವಿ ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪ್ರಮುಖ ಆರೋಪಿ ಸುಧೀರ್ ಜಿ. ಅಂಗೂರ್ಗೆ ಹೈಕೋರ್ಟ್ ಇಂದು ಜಾಮೀನು ನೀಡಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸುಧೀರ್ ಅಂಗೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅನಾರೋಗ್ಯದ ಕಾರಣ ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಸುಧೀರ್ ತೀವ್ರ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿದೆ ಎಂಬ ಅರ್ಜಿದಾರರ ಪರ ವಕೀಲರ ವಾದ ಪರಿಗಣಿಸಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ:
ಆನೇಕಲ್ ಬಳಿಯಿರುವ ಸಾವಿರಾರು ಕೋಟಿ ರೂ. ಮೌಲ್ಯದ ಅಲಯನ್ಸ್ ವಿವಿ ಒಡೆತನಕ್ಕೆ ಸಂಬಂಧಿಸಿದಂತೆ ಸ್ಥಾಪಕ ಸೋದರರಾದ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ವಿವಾದವಿತ್ತು. ಈ ಸಂದರ್ಭದಲ್ಲಿಯೇ 2019ರ ಅಕ್ಟೋಬರ್ 15ರಂದು ವಿವಿಯ ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಹತ್ಯೆಯಾಗಿತ್ತು. ಅಯ್ಯಪ್ಪ ದೊರೆ ಅವರು ಮಧುಕರ್ ಅಂಗೂರ್ ಪರ ಇದ್ದ ಕಾರಣಕ್ಕಾಗಿಯೇ ಸುಧೀರ್ ಅಂಗೂರ್ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಆರೋಪದಡಿ ಪೊಲೀಸರು ಬಂಧಿಸಿದ್ದರು. ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಬಂಧಿತರಾಗಿದ್ದ ಸುಧೀರ್ ಅಂಗೂರ್ಗೆ ವಿಚಾರಣಾ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು.