ಬೆಂಗಳೂರು: ಮಾಗಡಿ ರಸ್ತೆಯ ಸಾರ್ವಜನಿಕ ಜಾಗದಲ್ಲಿ ನಿರ್ಮಿಸಲಾಗಿರುವ ಸಾಯಿಬಾಬಾ ದೇವಾಲಯ ತೆರವು ಪ್ರಕರಣ ಕುರಿತಂತೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಬಿಬಿಎಂಪಿ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಮಾಗಡಿ ರಸ್ತೆಯ ನಿವಾಸಿ ಎಸ್.ರವಿಚಂದ್ರ ಸೇರಿದಂತೆ ಹಲವಾರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮುಖ್ಯನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠವು ಬಿಬಿಎಂಪಿ ಕ್ರಮ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿ ಮುಂದಿನ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರು ವಾದಿಸಿ ಸುಪ್ರೀಂಕೋರ್ಟ್ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ದೇವಸ್ಥಾನ, ಚರ್ಚ್ ಸೇರಿ ಇತರ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸುವಂತಿಲ್ಲ. ಆದರೆ, ಮಾಗಡಿ ರಸ್ತೆಯ ಸಾರ್ವಜನಿಕ ಉದ್ಯಾನದಲ್ಲಿ ಸಾಯಿಬಾಬಾ ದೇವಸ್ಥಾನವನ್ನು ಕಾನೂನು ಬಾಹಿರವಾಗಿ 2009ರಲ್ಲಿ ನಿರ್ಮಿಸಲಾಗಿದೆ. ಬಿಬಿಎಂಪಿ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಲಯ ಕಳೆದ ವಿಚಾರಣೆಯಲ್ಲಿ ದೇವಸ್ಥಾನ ತೆರವು ಕುರಿತು ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿತ್ತು. ಆದರೂ ಸಹ ಬಿಬಿಎಂಪಿ ಇದುವರೆಗೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ.