ಬೆಂಗಳೂರು: ಕಳೆದ ವಾರ ಸ್ವತಃ ಹೋಮ್ ಕ್ವಾರಂಟೈನ್‌ಗೆ ಒಳಗಾಗಿರುವ ವಿಚಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಇಂದು ನಡೆದ ಕಲಾಪದ ವೇಳೆ ಸ್ಪಷ್ಟಪಡಿಸಿದರು.
ಗುರುವಾರ ಸಾಲ ವಸೂಲಾತಿ ಪ್ರಕರಣಗಳ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ, ಕೊರೊನಾ ಸೋಂಕು ಕೋರ್ಟ್ ಕಲಾಪಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ವಿವರಿಸುವಾಗ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಈ ವಿಚಾರ ಪ್ರಸ್ತಾಪಿಸಿದರು.
ಕೊರೊನಾ ಹೈಕೋರ್ಟ್‌ನಲ್ಲಿಯೂ ವ್ಯಾಪಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕಳೆದ ವಾರ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾಗಿ ತಿಳಿಸಿದರು. ಜುಲೈ 29ರಿಂದ ಸಿಜೆ ಎ.ಎಸ್ ಓಕ ಕೋರ್ಟ್ ಕಲಾಪಗಳಿಂದ ದೂರವಿದ್ದರು.
ಕೊರೊನಾ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದ ನಂತರ ಮತ್ತೆ ಆಗಸ್ಟ್ 3ರ ಮಧ್ಯಾಹ್ನದಿಂದ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು. ಹೀಗಾಗಿ ಸಿಜೆ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣಗಳನ್ನು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು.
ಹೈಕೋರ್ಟ್ ಪ್ರಧಾನ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ 45ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಗೆಯೇ ಮತ್ತಷ್ಟು ಸಿಬ್ಬಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಹೈಕೋರ್ಟ್ ಕಟ್ಟಡಗಳು ಮತ್ತು ಆವರಣವನ್ನು ಸ್ವಚ್ಛಗೊಳಿಸಲು ಮತ್ತು ಸ್ಯಾನಿಟೈಸ್ ಮಾಡಲು ಶುಕ್ರವಾರದ ಕಲಾಪವನ್ನು ರದ್ದುಗೊಳಿಸಲಾಗಿದೆ.