ಬೆಂಗಳೂರು: ನಾಮಪತ್ರ ಸಲ್ಲಿಕೆಗಾಗಿ ವಿಧಾನಸೌಧಕ್ಕೆ ಜಕ್ಕೂರ್ ಏರ್ ಡ್ರೋಮ್ ನಿಂದ ಎಸ್ಕಾರ್ಟ್ ಮೂಲಕ ಆಗಮಿಸಿದ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್ ಅವರು ನಾನು ಯಾವುದೇ ಎಸ್ಕಾರ್ಟ್ ಬಳಸಿಲ್ಲ. ಬೆಂಗಳೂರಿನ ಟ್ರಾಫಿಕ್ ನಿಮಗೆ ಗೊತ್ತು ತಾನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಹೇಮಲತಾ ನಾಯಕ್ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಜಕ್ಕೂರಿಗೆ ಬಂದಿದ್ದಾರೆ. ಅಲ್ಲಿಂದ ಎಸ್ಕಾರ್ಟ್ ಮೂಲಕ ವಿಧಾನಸೌಧಕ್ಕೆ ಸುಮಾರು 2 ಗಂಟೆಗೆ ಆಗಮಿಸಿದ್ದಾರೆ. ಆದರೆ ಈ ಬಗ್ಗೆ ಕೇಳಿದಾಗ ಹೆಲಿಕಾಪ್ಟರ್ ಹಾಗೂ ಎಸ್ಕಾರ್ಟ್ ಬಳಕೆಯನ್ನು ಅಲ್ಲಗಳೆದಿದ್ದಾರೆ.
ನಮ್ಮ ಪಕ್ಷ ವಾಲ್ಮೀಕಿ ಸಮುದಾಯದ ಮಹಿಳೆಯನ್ನು ಪರಿಗಣಿಸಿ ಅವಕಾಶ ಕಲ್ಪಿಸಿದ್ದಾರೆ. ನಾನು ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನ್ನನ್ನು ಗುರುತಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾಲ್ಕು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿದೆ. ಛಲವಾದಿ ನಾರಾಯಣಸ್ವಾಮಿ, ಲಕ್ಷಣ ಸವದಿ, ಹೇಮಲತಾ ನಾಯಕ್, ಕೇಶವ್ ಪ್ರಸಾದ್ ನಾಮಪತ್ರ ಸಲ್ಲಿಸಿದ್ದಾರೆ. ನಾಲ್ಕು ಜನರಿಗೆ ಅಭಿನಂದನೆಗಳು. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ ಬಳಿಕ ನಾಲ್ವರು ಹೆಸರುಗಳನ್ನು ಕಳಿಸಿದ್ದೆವು. ಹೈಕಮಾಂಡ್ ನಾಯಕರು ಹೆಸರು ಅಂತಿಮ ಮಾಡಿ ಕಳಿಸಿದ್ದಾರೆ. ಇವರು ನನ್ನ ಟೀಮ್ ಸಹೋದ್ಯೋಗಿಗಳು. ನನಗೂ ಕೂಡ ಖುಷಿಯಾಗಿದೆ ಎಂದರು.
ರಾಜಕಾಲುವೆ ಕುಸಿತ: ಇದೇ ವೇಳೆ ಮಾತನಾಡಿದ ಶಾಸಕ ರವಿ ಸುಬ್ರಹ್ಮಣ್ಯ, ಶ್ರೀನಗರದಲ್ಲಿ ರಾಜಕಾಲುವೆ ಕಾಮಗಾರಿ ಕುಸಿತ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಶ್ರೀನಗರ ವಾರ್ಡ್‌ನಲ್ಲಿ ರಾಜಕಾಲುವೆ ಕಾಮಗಾರಿ ವೇಳೆ ಕುಸಿತ ಉಂಟಾಗಿದೆ. ಆ ಜಾಗಕ್ಕೆ ಹೋಗಿ ಪರಿಸ್ಥಿತಿ ಪರಿಶೀಲನೆ ಮಾಡಿಕೊಂಡು ಬಂದಿದ್ದೇನೆ. 40 ನಿಮಿಷ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಿದ್ದೇನೆ. ಒಬ್ಬರ ಕೈಗೆ ಏಟಾಗಿದೆ, ಚಿಕಿತ್ಸೆಗೆ ಕಳುಹಿಸಲಾಗಿದೆ. ಆಯುಕ್ತರ ಜೊತೆ ಕೂಡ ಮಾತನಾಡಿದ್ದೇನೆ ಎಂದು ತಿಳಿಸಿದರು.
ಏನಾದರೂ ದೋಷ ಇದ್ದರೆ ತನಿಖೆಗೆ ಆದೇಶ ಕೂಡ ನೀಡುತ್ತಾರೆ. ಒಂದೇ ಕಡೆ ಕಾಂಕ್ರಿಟ್ ಸುರಿದಿದ್ದರಿಂದ ಅವಘಡ ನಡೆದಿದೆ. ತೊಂದರೆಯಾದವರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸ ಮಾಡುತ್ತೇವೆ. 2 ಕೋಟಿ ಕಾಮಗಾರಿ ಇದು. ಕೊನೆ ಹಂತದ ಕಾಮಗಾರಿಯಾಗಿತ್ತು. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಕಾಂಕ್ರಿಟ್ ಕುಸಿದಿದ್ದರಿಂದ ಘಟನೆ ನಡೆದಿದೆ. ತಜ್ಞರು ಪರಿಶೀಲನೆ ನಡೆಸಿ ಏನಾಗಿದೆ ಎಂಬುದನ್ನು ತಿಳಿಸುತ್ತಾರೆ ಎಂದರು.
ಇದನ್ನೂ ಓದಿ: ಮದುವೆಯಾಗಿ, ಮೋಸ ಮಾಡುವುದೇ ಕಾಯಕ: ನಾಲ್ಕನೇ ಹೆಂಡ್ತಿಯಿಂದ ಪ್ರಕರಣ ಬೆಳಕಿಗೆ!