ಬೆಂಗಳೂರು: ಅಕ್ರಮ ಜಾಹೀರಾತು ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾದರಿಯಲ್ಲೇ ಗ್ರಾಮ, ತಾಲೂಕು, ಜಿಲ್ಲಾಮಟ್ಟ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಕ್ರಮ ಕೈಗೊಳ್ಳಲು ಸೂಕ್ತ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅಕ್ರಮ ಜಾಹೀರಾತುಗಳ ಫಲಕಗಳ ತೆರವು ಕೋರಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸೇರಿದಂತೆ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಪೀಠಕ್ಕೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲರು, 2020ರ ಜ.14 ರಿಂದ ಜಾರಿಗೆ ಬರುವಂತೆ ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆ (ಕೆಒಪಿಡಿ) 1981ರ ಅನ್ವಯ ಬಿಬಿಎಂಪಿ ಸೇರಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಅನಧಿಕೃತ ಜಾಹೀರಾತು ಪ್ರದರ್ಶಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಲಾಗಿದೆ.
ಜತೆಗೆ, ಕೆಒಪಿಡಿ ಕಾಯ್ದೆಯಡಿ ಯಾವುದೇ ದೂರು ಬಂದರೂ ಅವುಗಳನ್ನು ಸ್ವೀಕರಿಸಿ ಪ್ರಕರಣ (ಎಫ್‌ಐಆರ್) ದಾಖಲಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.