ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನೂರು ದಿನ ಪೂರೈಸಿದೆ. ಆದ್ರೆ ತವರಿನಲ್ಲಿ ಪಕ್ಷದ ಸೋಲು ಈ ನೂರು ದಿನದ ಸಂಭ್ರಮದ ಸಂತಸವನ್ನು ಕಸಿದುಕೊಂಡಂತಾಗಿದೆ.
ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡು ಪ್ರಮಾಣವಚನ ಸ್ವೀಕಾರ ಮಾಡಿದ ಬೊಮ್ಮಾಯಿ, ಮೊದಲ ಉಪಸಮರದಲ್ಲಿ ತಮ್ಮ ತವರಿನಲ್ಲೇ ಎಡವಿದ್ದಾರೆ. ಒಂದು ಕ್ಷೇತ್ರದಲ್ಲಿ ಗೆದ್ದರೂ ತವರು ಜಿಲ್ಲೆಯ ಕ್ಷೇತ್ರದಲ್ಲಿ ಸೋತು ಟೀಕೆಗೆ ಗುರಿಯಾಗಿದ್ದಾರೆ.
'ಸಿಂಪಲ್ ಸಿಎಂ'
ಮುಖ್ಯಮಂತ್ರಿ ಆದ ಆರಂಭದ ದಿನಗಳಲ್ಲಿ ಪೊಲೀಸ್ ಗೌರವ ವಂದನೆ ಇಡೀ ದಿನ ಮಾಡಬಾರದು, ದಿನಕ್ಕೆ ಒಮ್ಮೆ ಮಾತ್ರ ಮಾಡಿ ಎಂದು ಆದೇಶಿಸಿದ್ದ ಸಿಎಂ, ನಂತರ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ತ್ಯಜಿಸಿ ಸಿಗ್ನಲ್ ಫ್ರೀ ವ್ಯವಸ್ಥೆ ಬಳಸಿ ಸಂಚರಿಸುವ ಮೂಲಕ ಸರಳತೆ ಮೆರೆದು ಸಿಂಪಲ್ ಸಿಎಂ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ಸಿಎಂ ಸರಳತೆ ಹೈಕಮಾಂಡ್ ನಾಯಕರನ್ನು ಆಕರ್ಷಿಸಿದ್ದು ಸುಳ್ಳಲ್ಲ.
ಉಪ ಚುನಾವಣೆಯಲ್ಲಿ ಸೋಲು:
ಬೊಮ್ಮಾಯಿ ಆಡಳಿತಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎನ್ನುವ ಘೋಷಣೆ ಮಾಡಿದ್ದಾರೆ. ಇದು ರಾಜ್ಯದ ಹಲವು ನಾಯಕರಿಗೆ ನುಂಗಲಾರದ ತುತ್ತಾದರೂ ಹೈಕಮಾಂಡ್ ವಿರುದ್ಧ ದನಿ ಎತ್ತಲು ಸಾಧ್ಯವಾಗದೇ ತಮಗೆ ತೋಚಿದಂತೆ ವಿಶ್ಲೇಷಣೆ ಮಾಡಿಕೊಂಡಿದ್ದಾರೆ. ಆದರೆ, ಈಗ ಸಿಎಂ ನಾಯಕತ್ವದಲ್ಲಿ ಎದುರಿಸಿದ ಮೊದಲ ಉಪ ಚುನಾವಣೆಯಲ್ಲಿ ಸಿಎಂ ತವರು ಜಿಲ್ಲೆಯಲ್ಲೇ ಪಕ್ಷ ಮುಗ್ಗರಿಸಿರುವುದು ಬೊಮ್ಮಾಯಿ ನಾಯಕತ್ವವನ್ನು ಪಕ್ಷದೊಳಗೆ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಂತಾಗಿದೆ.
ಇದನ್ನೂ ಓದಿ: 100 ದಿನ ಪೂರೈಸಿದ ಬೊಮ್ಮಾಯಿ ಸರ್ಕಾರ... ಈವರೆಗೆ ಜಾರಿಗೆ ತಂದ ಯೋಜನೆಗಳೆಷ್ಟು?
ನೂರು ದಿನದ ಸಂಭ್ರಮಾಚರಣೆಗೆ ಹಾನಗಲ್ ಸೋಲು ವಿಘ್ನ ತಂದಿದೆ. ಸಾಧನೆಯನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿಯಿದೆ. ನೂರು ದಿನದ ಸಂಭ್ರಮಕ್ಕೆ ಹಾನಗಲ್ ಸೋಲಿನ ಕಾರ್ಮೋಡ ಕವಿದಿದ್ದು, ಪಕ್ಷದೊಳಗೆ ನಾಯಕತ್ವ ಚರ್ಚೆಯಂತಹ ಸ್ಥಿತಿಯನ್ನು ಎದುರಿಸಬೇಕಾಗಿದೆ.
ಬಿಟ್ ಕಾಯಿನ್ ಹಗರಣ:
ಇದರ ಜೊತೆ ಇದೀಗ ಬಿಟ್ ಕಾಯಿನ್ ಹಗರಣ ಕೂಡ ಭಾರಿ ಸದ್ದು ಮಾಡುತ್ತಿದೆ. ಸಿಸಿಬಿ, ಸಿಐಡಿ ನಂತರ ಈಗ ಸಿಬಿಐನ ಇಂಟರ್ಪೋಲ್ ಘಟಕ ಮತ್ತು ಜಾರಿ ನಿರ್ದೇಶನಾಲಯದ ಅಂಗಳಕ್ಕೆ ಪ್ರಕರಣ ತಲುಪಿದ್ದು, ಪ್ರತಿಪಕ್ಷಗಳು ಬಿಟ್ ಕಾಯಿನ್ ಅಸ್ತ್ರವನ್ನೇ ದಾಳವನ್ನಾಗಿ ಉಪಯೋಗಿಸಿಕೊಂಡು ಟೀಕೆ ಆರಂಭಿಸಿವೆ.
ಒಟ್ಟಿನಲ್ಲಿ ಬೊಮ್ಮಾಯಿ ಸರ್ಕಾರದ ನೂರು ದಿನದ ಸಾಧನೆಯ ಸಂಭ್ರಮಕ್ಕೆ ಹಾನಗಲ್ ಸೋಲು ಮತ್ತು ಬಿಟ್ ಕಾಯಿನ್ ಪ್ರಕರಣ ಅಡ್ಡಿಯಾಗಿದೆ.