ಬೆಂಗಳೂರು: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮೈಸೂರು ಜಿಲ್ಲೆ ವಿಭಜನೆಗೆ ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ.
ಈ ಕುರಿತಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಿ, ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿಸಬೇಕು. ದೇವರಾಜ ಅರಸು ಅವರ ಹೆಸರನ್ನು ಹೊಸ ಜಿಲ್ಲೆಗೆ ನಾಮಕರಣ ಮಾಡಬೇಕು. ಹಳೆಯ ನಾಲ್ಕು ತಾಲೂಕು ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ಘೋಷಣೆಯಾದ ಎರಡು ತಾಲೂಕು ಸೇರಿಸಿ ಒಟ್ಟು 6 ತಾಲೂಕುಗಳನ್ನ ಸೇರಿಸಿ ಹೊಸ ಜಿಲ್ಲೆ ಮಾಡಬೇಕು. ಈ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ಪ್ರಸ್ತಾಪ ಇದೆ. ಶೀಘ್ರದಲ್ಲೇ 6 ತಾಲೂಕುಗಳ ಜನಪ್ರತಿನಿಧಿಗಳನ್ನ ಕರೆದು ಸಭೆ ಮಾಡಲಾಗುತ್ತದೆ ಎಂದರು.
ಇನ್ನು ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಅಕ್ಟೋಬರ್ 22ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತೀರ್ಪು ಹೊರಬೀಳಲಿದೆ. ಬಳಿಕ ಚುನಾವಣೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ಇನ್ನು ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಪರಮೇಶ್ವರ್ ಅವರೇ ಸ್ವತಃ ಐಟಿ ದಾಳಿ ವಿಚಾರ ರಾಜಕಾರಣಗೊಳಿಸಬಾರದು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪರಮೇಶ್ವರ್ ಅವರೇ ಹೇಳಿರುವಾಗ ಮಿಕ್ಕವರು ದಾಳಿ ರಾಜಕೀಯ ಉದ್ದೇಶದಿಂದ ನಡೆಯುತ್ತಿದೆ ಎನ್ನುವುದು ಸರಿಯಲ್ಲ ಎಂದರು.