ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ 17 ಜನ ಕಾರಣ ಎನ್ನುತ್ತಾರೆ. ನನ್ನನ್ನು ಅಧಿಕಾರದಿಂದ ತೆಗೆದಿದ್ದು 17 ಜನ ಇದಾರಲ್ಲ ಅವರೇ ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವರ ಬಗ್ಗೆ ಯಾವುದೇ ಬೇಜಾರಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರು ನನ್ನ ಜೀವ ಉಳಿಸಲು ಅಧಿಕಾರದಿಂದ ಕೆಳಗೆ ಇಳಿಸಿದ್ದಾನೆ. ಕಾಂಗ್ರೆಸ್ನಿಂದಾಗಿ ಅಧಿಕಾರ ಕಳೆದುಕೊಳ್ಳಲಿಲ್ಲ. ದೇವರು ನನಗೆ ಒಳ್ಳೆಯದನ್ನು ಮಾಡಲು ಕೆಳಗೆ ಇಳಿಸಿದ್ದಾನೆ. ತುಂಬಾ ಸಂತೋಷದಿಂದಲೇ ಸಿಎಂ ಸ್ಥಾನದಿಂದ ಕೆಳಗಿಳಿದೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಈಗ 10 ಜನ ಸಿಎಂ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಲೇ ಅವರೆಲ್ಲಾ ಸೂಟು ಬೂಟು ಹೊಲಿಸಿಕೊಂಡು ಕೂತಿದ್ದಾರೆ. ಕಾಂಗ್ರೆಸ್ನ ನಾಯಕರೊಬ್ಬರು ಇದು ನನ್ನ ಕೊನೆಯ ಚುನಾವಣೆ ಎಂದು 2018ರಲ್ಲಿ ಹೇಳಿದ್ದರು. ಈಗ ಅವರೇ ಮತ್ತೆ ಸಿಎಂ ಆಗಲು ಮುಂದಾಗಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ:
ನಾನೇ ಎರಡು ವರ್ಷ ಮುಖ್ಯಮಂತ್ರಿ, ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎಂದಿದ್ದಾರೆ. ಯಡಿಯೂರಪ್ಪ ಈ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನು ಮೊದಲು ನಿಲ್ಲಿಸಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಈ ಬಾರಿ ಜನ ನಿಮಗೆ ಬುದ್ಧಿ ಕಲಿಸ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ಗೆ ಉತ್ತರ ಕರ್ನಾಟಕ ಹೆಬ್ಬಾಗಿಲು :
ಹಾವೇರಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಇರಲಿಲ್ಲ. ಈಗ ಉತ್ತರ ಕರ್ನಾಟಕ ಜೆಡಿಎಸ್ಗೆ ಹೆಬ್ಬಾಗಿಲು ಆಗಲಿದೆ. ನಯಾಜ್ ಶೇಖ್ ಅವರೇ ಹಾನಗಲ್ ಕ್ಷೇತ್ರದ ನಮ್ಮ ಅಭ್ಯರ್ಥಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಇದನ್ನು ಮುಸ್ಲಿಂ ಬಂಧುಗಳು ತಿಳಿದುಕೊಳ್ಳಬೇಕು. 2006 ರಲ್ಲಿ ಜೆಡಿಎಸ್ ಅನ್ನು ಮುಗಿಸಲು ಕಾಂಗ್ರೆಸ್ ಹೊರಟಿತ್ತು. ಆಗ ನಾವು ಎಚ್ಚೆತ್ತುಕೊಂಡಿದ್ದೆವು. ಪಕ್ಷವನ್ನ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಹೋಗಬೇಕಾಯಿತು. ಆದರೂ ನಮ್ಮ ತತ್ವ, ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ. ಅಂದು ಬಿಜೆಪಿಯವರೇ ನಮ್ಮ ಮನೆ ಬಾಗಿಲಿಗೆ ಬಂದರು. 2013 ರಲ್ಲಿ ನಮ್ಮ ಹೋರಾಟದ ಫಲವಾಗಿ ಬಿಜೆಪಿ ಮೂರು ಭಾಗವಾಯಿತು ಎಂದು ಹೇಳಿದರು.
ನಮ್ಮ ಆಟ ಪ್ರಾರಂಭ:
ಸೂತಕದ ಮನೆಯಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನೆ ಇದ್ದೆ. ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ. ಇನ್ನು ಮುಂದೆ ನಮ್ಮ ಆಟ ಹೇಗಿರುತ್ತದೆ ಎನ್ನುವುದನ್ನು ನೋಡಿ ಎಂದು ಹೆಚ್ಡಿಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಹಾಕಿದರು.