ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಸರಣ ವೇಗ ಹೆಚ್ಚುತ್ತಿದೆ. ನೂರರ ಸಮೀಪದಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ 10 ಸಾವಿರದ ಗಡಿ ದಾಟಿದೆ. ನಿತ್ಯ ನೂರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ನಡುವೆ ರಾಜಧಾನಿ ಬೆಂಗಳೂರು ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಒಂದರಲ್ಲೇ 10 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರದ ಸರ್ಕಾರಿ ಆಸ್ಪತ್ರೆಗಳನ್ನು ಇದೀಗ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದರಿಂದಾಗಿ ನಾನ್ ಕೋವಿಡ್ ರೋಗಿಗಳ ಪಾಡೇನು ಎಂಬ ಪ್ರಶ್ನೆ ಕಾಡುತ್ತಿದೆ.
ನಗರಕ್ಕೆ ದೊಡ್ಡ ಆಸ್ಪತ್ರೆ ವಿಕ್ಟೋರಿಯಾ. ಬೆಂಗಳೂರಿಗರು ಮಾತ್ರವಲ್ಲದೇ ವಿವಿಧ ಜಿಲ್ಲೆ, ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ತಪಾಸಣೆಗಾಗಿ ಬರ್ತಾರೆ. ಆದರೀಗ ಕೊರೊನಾ ಕಾರಣಕ್ಕೆ ಕೋವಿಡೇತರ ರೋಗಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲಾಗಿದೆ.
ಈ ಹಿಂದೆ ಸೋಂಕಿನ ಪ್ರಮಾಣ ಇಳಿಕೆಯಾಗಿತ್ತು. ಜನವರಿ 21 ರಿಂದ ಕೋವಿಡ್ ಚಿಕಿತ್ಸಾ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಪ್ರಸ್ತುತ ಸ್ಥಿತಿಯಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಿದ್ದು ಎಲ್ಲೆಡೆ ಹರಡುತ್ತಿರುವ ಕಾರಣಕ್ಕೆ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು, ಚಿಕಿತ್ಸೆ ನೀಡಿ ಒಂದು ವಾರದೊಳಗೆ ಡಿಸ್ಚಾರ್ಜ್ ಮಾಡುವಂತೆ ಸೂಚಿಸಲಾಗಿದೆ.
ಪರ್ಯಾಯ ವ್ಯವಸ್ಥೆ ಮರೆತ ಸರ್ಕಾರ?
ಈ ಮಧ್ಯೆ ಕೋವಿಡೇತರ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಎಲ್ಲಿದೆ?, ನಾನ್ ಕೋವಿಡ್ ರೋಗಿಗಳು ಆಸ್ಪತ್ರೆಗೆ ಬಂದರೆ ದಾಖಲಿಸಿಕೊಳ್ಳಲು ತಿರಸ್ಕರಿಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಹಾಗಾದರೆ ರೋಗಿಗಳು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
ಬಿಎಂಸಿಆರ್ಐ ಆವರಣದಲ್ಲಿ ಪಿಎಂಸಿಸಿವೈ ಬ್ಲಾಕ್, ಮಿಂಟೋ, ವಾಣಿವಿಲಾಸ್ ಆಸ್ಪತ್ರೆಗಳಿವೆ. ಆದರೆ ಪಿಎಂಸಿಸಿವೈ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಆಗಿದ್ದು ನ್ಯೂರೋ ಸರ್ಜರಿ, ಜಿಐ ಸರ್ಜರಿ, ಪೀಡಿಯಾಟ್ರಿಕ್ ಸರ್ಜರಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಬೆಂಗಳೂರಲ್ಲಿ ಮಹಾಮಾರಿ ಕೋವಿಡ್ಗೆ 6 ತಿಂಗಳ ಹಸುಗೂಸು ಬಲಿ
ಮಿಂಟೋ ಆಸ್ಪತ್ರೆ ಕಣ್ಣಿಗೆ ಸಂಬಂಧಿಸಿದ್ದಾಗಿದೆ. ವಾಣಿವಿಲಾಸ್ನಲ್ಲಿ ಹೆರಿಗೆ ಮತ್ತು ಪಿಡಿಯಾಟ್ರಿಕ್ಸ್ ಚಿಕಿತ್ಸೆ ಸಿಗುತ್ತದೆ. ಆದರೆ ಕೋವಿಡ್ ನೆಗೆಟಿವ್ ಇದ್ದು ಜ್ವರದಿಂದ ಬಳಲುವವರು, ಡಯಾಬಿಟಿಸ್, ಹೈಪರ್ಟೆನ್ಶನ್, ಆಕ್ಸಿಡೆಂಟ್ ಕೇಸ್, ಗಾಯಳು ರೋಗಿಗಳ ಪಾಡೇನು?. ಅವರೆಲ್ಲರೂ ಎಲ್ಲಿಗೆ ಹೋಗಬೇಕು ಎನ್ನುವುದು ದೊಡ್ಡ ಪ್ರಶ್ನೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮನವಿ:
ಕೋವಿಡ್ ಚಿಕಿತ್ಸೆಯಲ್ಲಿ ನಿರತರಾಗಿರುವ ಬೆಂಗಳೂರು ಮೆಡಿಕಲ್ ಕಾಲೇಜಿನ 250 ಪಿಜಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಇಂತಹ ಕಠಿಣ ಸಂದರ್ಭದಲ್ಲೂ ಅವರಿಗೆ ಕೋವಿಡ್ ಭತ್ಯೆಯಾಗಲಿ, ಯಾವುದೇ ಸೌಕರ್ಯವಾಗಲಿ ನೀಡಿಲ್ಲ ಅಂತ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ವಿಶೇಷ ಭತ್ಯೆಯಿಲ್ಲದೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.