ಬೆಂಗಳೂರು: ಹಕ್ಕಿಜ್ವರ ಭೀತಿಯಿಂದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ಥಗಿತಗೊಳಿಸಿದ್ದ ಮಾಂಸದೂಟವನ್ನು ಟೆಂಡರ್ ಕರೆದು ಮುಂದಿನ ವಾರದಿಂದ ಸಜಾ ಬಂಧಿಗಳಿಗೆ ನೀಡಲು ಜೈಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕೊರೊನಾ ಮಹಾಮಾರಿ ನಡುವೆ ಮೈಸೂರಿನಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಬಂದಿರುವುದು ದೃಢವಾಗುತ್ತಿದ್ದಂತೆ ಮೈಸೂರಿನಲ್ಲಿ ಕೋಳಿ ಅಂಗಡಿಗಳು ಬಂದ್ ಆಗಿದ್ದವು. ಇದೇ ಭೀತಿಯಿಂದಲೇ ಮಹಾನಗರದಲ್ಲಿ ಕೋಳಿ ಮಾಂಸ ದರದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಎಲ್ಲ ಬೆಳವಣಿಗೆಯಿಂದಾಗಿ ಸೆಂಟ್ರಲ್ ಜೈಲಿನ ಸಜಾ ಬಂಧಿಗಳಿಗೆ ಕೋಳಿ ಹಾಗೂ ಕುರಿ ಮಾಂಸದೂಟ ನಿಲ್ಲಿಸಲಾಗಿತ್ತು. ಕಳೆದ ಎರಡು ತಿಂಗಳ ಬಳಿಕ ಕೈದಿಗಳಿಗೆ ಮಾಂಸದೂಟ ನೀಡಲು ಕಾರಾಗೃಹ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಧೀನ ಕೈದಿಗಳು ಸೇರಿ 4,500ಕ್ಕಿಂತ ಸಜಾ ಬಂಧಿಗಳಿದ್ದಾರೆ. ಜೈಲಿನ ಕೈಪಿಡಿ ಪ್ರಕಾರ ಪ್ರತಿ ಶುಕ್ರವಾರ ಮಾಂಸಾಹಾರ ನೀಡಲಾಗುತ್ತಿದೆ. ಪ್ರತಿ ಕೈದಿಗೂ ಚಿಕನ್ 200 ಗ್ರಾಂ ಹಾಗೂ 120 ಗ್ರಾಂ ಮಟನ್ ನೀಡಬೇಕು. ಜೈಲಿಗೆ ಮಾಂಸ ಸಾಗಿಸಲು ಟೆಂಡರ್ ಕರೆದು ಗುತ್ತಿಗೆದಾರರನ್ನು ನಿಯೋಜಿಸಬೇಕು. ನಿಯಮದ ಪ್ರಕಾರ ತಲೆ ಕತ್ತರಿಸಿ, ಚರ್ಮ ಸುಲಿದುಕೊಂಡು ಕುರಿಗಳನ್ನು ಜೈಲಿಗೆ ತರಬೇಕು. ಅಲ್ಲಿ ಪ್ರತಿ ಕುರಿಯ ಮಾಂಸವನ್ನೂ ವೈದ್ಯರು ಪರಿಶೀಲಿಸುತ್ತಾರೆ. ಬಳಿಕ ಜೈಲರ್ ಸಮ್ಮುಖದಲ್ಲೇ ಅದನ್ನು ಕತ್ತರಿಸಿ ಅಡುಗೆ ಕೋಣೆಗೆ ಸಾಗಿಸಲಾಗುತ್ತದೆ.
ಸೆರೆಮನೆಯಲ್ಲಿರುವ ವಿಚಾರಣಾಧೀನ ಹಾಗೂ ಸಜಾಬಂಧಿಗಳನ್ನು ನೋಡಲು ಆಗಮಿಸುವ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸಹಚರರನ್ನು ಕೈದಿಗಳನ್ನು ಭೇಟಿಯಾಗದಂತೆ ಕೈಗೊಂಡಿದ್ದ ತೀರ್ಮಾನ ಸಡಿಲಿಕೆ ಮಾಡಲಾಗಿಲ್ಲ. ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಮುಂಜಾಗ್ರತ ಕ್ರಮವಾಗಿ ಜೈಲಿನ ಅಧೀಕ್ಷಕರು ಈ ನಿರ್ಧಾರ ಕೈಗೊಂಡಿದ್ದರು. ಸೆರೆಮನೆಗೆ ಬರುವ ಆರೋಪಿಗಳಿಗೂ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ.