ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸತ್ಯ ಗಣಪತಿ ದೇವಸ್ಥಾನವನ್ನು ತರಕಾರಿ, ಸೊಪ್ಪು, ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.
ಪ್ರತಿ ಬಾರಿಯೂ ವಿಶೇಷ ಅಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಸತ್ಯ ಗಣಪತಿ ದೇಗುಲದಲ್ಲಿ ಕಳೆದ ಬಾರಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಹೆಚ್ಚಿನ ಅಲಂಕಾರವಿಲ್ಲದೆ ಗಣೇಶ ಹಬ್ಬವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವಿಜೃಂಭಣೆಯಿಂದ ದೇವಾಸ್ಥಾನವು ಹಬ್ಬ ಆಚರಿಸುತ್ತಿದ್ದು, ಭಕ್ತರಿಗೆ ಅವಕಾಶ ನೀಡಲಾಗಿದೆ. ದೇವಸ್ಥಾನದ ಸಿಬ್ಬಂದಿಗೆ ಲಸಿಕಾ ಕಾರ್ಯವೂ ಪೂರ್ಣವಾಗಿದೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಣೇಶ ಉತ್ಸವ ಸಮಿತಿ ಪ್ರತಿಭಟನೆಗೆ ಮಣಿದ ಬಿಬಿಎಂಪಿ: ನಿಯಮಗಳಲ್ಲಿ ಸಡಿಲಿಕೆ
ಪ್ರತ್ಯೇಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೆ ದೇವಸ್ಥಾನದಲ್ಲೇ ಇರುವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಈ ಬಾರಿ ಸ್ವಲ್ಪ ಮಟ್ಟಿಗೆ ಕೊರೊನಾ ಮಹಾಮಾರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಹಬ್ಬ ಆಚರಿಸಲಾಗುತ್ತಿದೆ. ಮುಸುಕಿನ ಜೋಳ, ತರಹೇವಾರಿ ಹೂವುಗಳು, ವಿಧ ವಿಧದ ತರಕಾರಿಗಳು ಹಾಗೂ ಸೊಪ್ಪುಗಳನ್ನು ಬಳಸಿ ಅಲಂಕಾರ ಮಾಡಲಾಗಿದ್ದು, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಮ್ ಮೋಹನ ರಾಜ್ ಹೇಳಿದ್ದಾರೆ.