ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ರೈತನೊಬ್ಬ ರೊಟ್ಟಿಗಳನ್ನು ಉಡುಗೊರೆಯಾಗಿ ನೀಡಿದ್ದಾನೆ.
ಧಾರವಾಡ ಜಿಲ್ಲೆ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀಹರಿ ಎಂಬ ರೈತನಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸಾಲ ಹೆಚ್ಚಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆಂದು ಗೋವಿಂದಪ್ಪ ಪತ್ರ ಬರೆದಿದ್ದರು. ತಕ್ಷಣವೇ ಸ್ಪಂದಿಸಿದ ಅಂದಿನ ಸಿಎಂ ಕುಮಾರಸ್ವಾಮಿ, ಸಾಲ ಮನ್ನಾ ಆಗುತ್ತೆ. ಆತ್ಮಹತ್ಯೆಯಂತಹ ನಿರ್ಧಾರ ಮಾಡಬಾರದೆಂದು ರೈತ ಗೋವಿಂದಪ್ಪ ಶ್ರೀಹರಿಯವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಸಾಲ ಮನ್ನಾ ಮಾಡಿದ್ದನ್ನು ಸ್ಮರಿಸಿ ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಡ್ರೈ ಪಲ್ಯಾ ತಯಾರು ಮಾಡಿ ಒಂದು ದೊಡ್ಡ ಬಾಕ್ಸ್ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಜೆಪಿ ನಗರ ನಿವಾಸಕ್ಕೆ ಕೋರಿಯರ್ ಮಾಡಿ ವಿಶೇಷ ಕೃತಜ್ಞತೆಯನ್ನು ಪತ್ರದ ಮೂಲಕ ತಿಳಿಸಿದ್ದಾರೆ.