ಬೆಂಗಳೂರು: ಕರ್ನಾಟಕದಲ್ಲಿ 1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿದೆ. ಸರಿ ರಾತ್ರಿ ಎಲ್ಲ ಜನರು ಬೀದಿಗೆ ಬಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. 1947ರಲ್ಲಿ ಸ್ವಾತಂತ್ರ್ಯ ಬಂದಾಗ ಇಡೀ ರಾತ್ರಿ ಜಾಗರಣೆ ಮಾಡಿದ ರೀತಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ .
ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ದಿನದಿಂದ ಪ್ರಧಾನಿ ಮೋದಿಯವರ ಕರೆಯ ಮೇರೆಗೆ ಇಡೀ ಭಾರತದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆದಿದೆ. ಭಾರತದಲ್ಲಿ ಸ್ವಾತಂತ್ರ್ಯದ ಅನೇಕ ಘಟ್ಟಗಳನ್ನು ನಾವು ನೋಡಿದ್ದೇವೆ. ಹಿಂದೆಂದೂ ಕಾಣದ ಉತ್ಸಾಹ, ದೇಶಭಕ್ತಿ ಇಂದು ನಾವು ಕಾಣುತ್ತಿದ್ದೇವೆ ಎಂದರು.
ಜನರಲ್ಲಿ ಅಪಾರ ದೇಶಭಕ್ತಿಯನ್ನು ನಾವಿಂದು ಕಾಣುತ್ತಿದ್ದೇವೆ. ಮುಂದಿನ 25 ವರ್ಷ ಅಮೃತಕಾಲಕ್ಕೆ ದೇಶವನ್ನು ಕೊಂಡೊಯ್ಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮೆಲ್ಲರಿಗೂ ಇದು ಸೌಭಾಗ್ಯದ ಸಮಯ, ಇಂತಹ ಸಮಯದಲ್ಲಿ ರಾಜ್ಯವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಅಂತ ಭಾವಿಸಿದ್ದೇನೆ. ಇಂದು ಇಡೀ ಕರ್ನಾಟಕ ಒಗ್ಗೂಡಿದೆ. ರಾಜ್ಯದ ಪ್ರತಿಯೊಬ್ಬರು ಕೈಬೀಸಿ ನಾವು ನಿಮ್ಮ ಜೊತೆ ಇದ್ದೇವೆ ಅಂತ ಹೇಳುತ್ತಿದ್ದಾರೆ. ಇದರಿಂದ ನಮ್ಮ ದೇಶ ಸುರಕ್ಷಿತವಾಗಿದೆ ಎಂಬ ಸಂದೇಶ ಸಿಗುತ್ತಿದೆ ಎಂದರು.
ಕರ್ನಾಟಕದ ಜನತೆಗೆ ಹೃದಯಪೂರ್ವಕ ವಂದನೆ ಹೇಳುತ್ತೇನೆ. ಯಾವ ಜನ್ಮದ ಪುಣ್ಯವೋ ಭಾರತ ಮಾತೆಯ ಸೇವೆ ಮಾಡುತ್ತಿದ್ದೇವೆ. ಜಾತಿ ಮತ ಪಂಥ ಮೀರಿ ಇಡೀ ದೇಶ ಸಂಭ್ರಮಿಸಿದೆ. ಸಾರೆ ಜಹಾಂಸೆ ಅಚ್ಚಾ ಹಿಂದೂಸ್ತಾನ ಹಮಾರ ಇದು ಅಕ್ಷರಶಃ ನಿಜವಾಗಿದೆ. ಭಾರತದ ಭಾಗ್ಯವಿಧಾತ ಭವ್ಯವಾಗಿದೆ ಅಂತ ಹೇಳುತ್ತೇನೆ. ನಮ್ಮ ಧರ್ಮಗ್ರಂಥ ಸಂವಿಧಾನ ಎಂದು ಪ್ರಧಾನಿಯವರು ಹೇಳಿದ್ದಾರೆ. ದೇಶದ ಋಣವನ್ನು ತೀರಿಸುವ ಕೆಲಸ ಮಾಡೋಣ. ಎಲ್ಲಾ ವರ್ಗದ ಜನರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ : ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರು ಫೋಟೋ ಇಲ್ಲ ಎನ್ನುವ ಚಿಂತೆ : ಸಿಎಂ ವ್ಯಂಗ್ಯ