ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ತೋರಿರುವ ಹಿನ್ನೆಲೆ ಫಲಿತಾಂಶ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ನಿರಾಕರಿಸಿದ್ದಾರೆ. ಪಂಜಾಬ್ ಉತ್ತರ ಪ್ರದೇಶ ಹಾಗೂ ಗೋವಾದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದ ಕಾಂಗ್ರೆಸ್ಸಿಗೆ ಈ ಮೂರು ರಾಜ್ಯದಲ್ಲಿ ಮಾತ್ರವಲ್ಲದೆ ಮಣಿಪುರ ಹಾಗೂ ಉತ್ತರಾಖಂಡ್ ನಲ್ಲಿಯೂ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆ ಎಲ್ಲಿಯೂ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಈ ಕುರಿತು ಎಂದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಂದು ತಮ್ಮ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಿಂದ ವಿಧಾನಸೌಧಕ್ಕೆ ಹೊರಟಿದ್ದ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಪೂರ್ಣ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡುವುದಾಗಿ ಹೇಳಿ ಅವರು ಅಲ್ಲಿಂದ ತೆರಳಿದರು. ವಿಧಾನಸೌಧ ಪ್ರವೇಶ ಸಂದರ್ಭದಲ್ಲಿಯೂ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿನ್ನೆ ತಡರಾತ್ರಿವರೆಗೂ ಗೋವಾದಲ್ಲಿದ್ದರು. ಅವರೂ ಚುನಾವಣೆ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರಸ್ತಾಪಿಸಿದಾಗ ಪಕ್ಷದ ನಾಯಕರಾದ ಪ್ರಿಯಾಂಕ್ ಖರ್ಗೆ ಹಾಗೂ ಯು ಟಿ ಖಾದರ್ ಮತ್ತಿತರ ಬೆರಳೆಣಿಕೆಯಷ್ಟು ಸದಸ್ಯರು ಪಕ್ಷವನ್ನು ಪ್ರತಿಪಾದಿಸಿಕೊಳ್ಳಲು ಹೆಣಗಾಡಿದ್ದು ಕಂಡುಬಂತು.
ಉತ್ತರಪ್ರದೇಶದಲ್ಲಿ ತುಂಬಾ ಹೀನಾಯ ಸ್ಥಿತಿಯನ್ನು ಪ್ರದರ್ಶಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಪ್ರಿಯಾಂಕಾ ಗಾಂಧಿ ಶಕ್ತಿ ತುಂಬಬಲ್ಲ ನಾಯಕಿಯಲ್ಲ ಎನ್ನುವ ಸಂಶಯ ಉಂಟು ಮಾಡುವಂತೆ ಮಾಡಿದೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪಂಚರಾಜ್ಯ ಚುನಾವಣೆ ಫಲಿತಾಂಶ ಮೂಲಕ ಉತ್ತರ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನ ಇನ್ನಷ್ಟು ನಿರಾಸೆ ಮೂಡಿಸಿದೆ. ಇದರಿಂದಲೇ ಯಾವೊಬ್ಬ ರಾಜ್ಯನಾಯಕರು ಇದುವರೆಗೂ ಪಂಚರಾಜ್ಯ ಚುನಾವಣೆ ಹಿನ್ನಡೆಗೆ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ ಎಂದು ಹೇಳಲಾಗ್ತಿದೆ.