ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಮನೆಯ ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಿದ್ದ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ದುಷ್ಕರ್ಮಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಶ್ರೀನಿವಾಸ್ ನಾಯ್ಡು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಾದ ಅಭಿನಂದನ್, ಶಶಾಂಕ್, ನಿರ್ಮಲ್, ರಾಕೇಶ್ ಹಾಗೂ ಗಣೇಶ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರು ವಕೀಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಅ.19 ರ ಮಧ್ಯರಾತ್ರಿ 12.30 ಕ್ಕೆ ಆರ್.ಎಂ.ವಿ ಬಡಾವಣೆಯ ಸಪ್ತಗಿರಿ ಅಪಾರ್ಟ್ಮೆಂಟ್ ಬೇಸ್ ಮೆಂಟ್ನಲ್ಲಿ ನಿಲ್ಲಿಸಲಾಗಿದ್ದ ಐಷಾರಾಮಿ ರೇಂಜ್ ರೋವರ್ ಕಾರು ಧಗಧಗನೇ ಹೊತ್ತಿ ಉರಿದಿತ್ತು. ಮುಸುಕು ಹಾಕಿಕೊಂಡು ಬೈಕ್ನಲ್ಲಿ ಬಂದಿದ್ದ ಕಿಡಿಗೇಡಿಗಳು ಕಾರಿಗೆ ಪೆಟ್ರೋಲ್ ಎರಚಿ ಬೆಂಕಿಯಿಟ್ಟು ಪರಾರಿಯಾಗಿದ್ದರು. ಇದೇ ವೇಳೆ ಬೆಂಕಿಯ ಹೊಗೆ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಆವರಿಸಿಕೊಂಡು, ಕೆಲಕಾಲ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು.
ಈ ಸಂಬಂಧ ಸದಾಶಿವನಗರ ಪೊಲೀಸರಿಗೆ ಉದ್ಯಮಿ ಶ್ರೀನಿವಾಸ್ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಇದೀಗ ಐವರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಬಂಧಿತ ಆರೋಪಿಗಳಿಗೂ ಉದ್ಯಮಿಗೂ ಯಾವುದೇ ಪರಿಚಯವಿಲ್ಲ ಎಂದು ತಿಳಿದುಬಂದಿದೆ. ಯಾವ ಕಾರಣಕ್ಕಾಗಿ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬರಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಪ್ರಮುಖ ಆರೋಪಿ ಸಿಕ್ಕಿಬಿದ್ದರೆ ಘಟನೆಗೆ ಕಾರಣ ತಿಳಿಯಲಿದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.