ನೆಲಮಂಗಲ : ಮೈಸೂರಿನಲ್ಲಿ ನಂದಿನಿ ನಕಲಿ ತುಪ್ಪದ ಜಾಲ ಬೆಳಕಿಗೆ ಬಂದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕೆಎಂಎಫ್ ಅಧಿಕಾರಿಗಳು ಖಾಸಗಿ ಗೋದಾಮುಗಳ ಮೇಲೆ ದಾಳಿ ನಡೆಸಿದ್ದು, ನೆಲಮಂಗಲದಲ್ಲಿ 15 ಲಕ್ಷ ರೂ. ಮೌಲ್ಯದ 270 ಕೇಸ್ ನಕಲಿ ತುಪ್ಪ ಪತ್ತೆಹಚ್ಚಿದ್ದಾರೆ.
ಮೈಸೂರಿನಿಂದ ಕೆಎಂಎಫ್ ಹೆಸರಿನಲ್ಲಿ ನಕಲಿ ತುಪ್ಪ ಹಲವೆಡೆ ಸರಬರಾಜು ಆದ ಮಾಹಿತಿ ಹೊರಬೀಳ್ತಿದ್ದಂತೆ ಕೆಎಂಎಫ್ ನಿರ್ದೇಶಕ ಜಯ್ ರಾಮ್, ಫುಡ್ ಸೇಫ್ಟಿ ಅಧಿಕಾರಿ ಅನುಸೂಯ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಸಮೀಪದ ಮೆರಬೋ ಲ್ಯಾಬ್ಸ್ ಪ್ರೈ ಕಂಪನಿ ಸೇರಿದಂತೆ ಡೀಲ್ ಶೇರ್ ಗೋದಾಮಿನ ಮೇಲೆ ದಾಳಿ ನಡೆಸಿ, ನಕಲಿ ತುಪ್ಪವನ್ನ ಪತ್ತೆ ಹಚ್ಚಿದ್ದಾರೆ.
ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ನಕಲಿ ನಂದಿನಿ ತುಪ್ಪದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಸುಮಾರು 15 ಲಕ್ಷ ಮೌಲ್ಯದ 270 ಕೇಸ್ ನಕಲಿ ತುಪ್ಪವನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ, ಮೊನ್ನೆ ನಡೆಸಿದ ದಾಳಿಯಲ್ಲಿ ಹೊಸಕೋಟೆ ಯಲ್ಲಿ 7 ಕೇಸ್ ಮತ್ತು ವೈಟ್ ಫೀಲ್ಡ್ ನಲ್ಲಿ 70 ಕೇಸ್ ತುಪ್ಪ ಪತ್ತೆಯಾಗಿತ್ತು.
ಈ ಸಂಬಂಧ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸಿಪಿಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೈಸೂರಿನಲ್ಲಿ ಬಯಲಾಗಿದ್ದ ನಕಲಿ ತುಪ್ಪ ರಾಜ್ಯದ ಮೂಲೆ ಮೂಲೆಗಳಲ್ಲಿ ಸರಬರಾಜು ಆಗಿರುವುದು ಸದ್ಯಕ್ಕೆ ಕಂಡು ಬರುತ್ತಿದೆ.