ಬೆಂಗಳೂರು: ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸಿ ಅರ್ಥವ್ಯವಸ್ಥೆಗೆ ಕೊಡಲಿಪೆಟ್ಟು ನೀಡುತ್ತಿದ್ದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಪಾದರಾಯನಪುರದ ಶಾಮಣ್ಣ ಗಾರ್ಡನ್ ನಿವಾಸಿಗಳಾದ ಮೊಹಮ್ಮದ್ ಇಮ್ರಾನ್, ಜಮಾಲ್ ಅಕ್ತರ್ ಹಾಗೂ ಗಂಗೊಂಡನಹಳ್ಳಿಯ ಮುಬಾರಕ್ ಬಂಧಿತ ಆರೋಪಿಗಳು. ಬಂಧಿತರಿಂದ 100 ರೂಪಾಯಿ ಮುಖಬೆಲೆಯ 198 ನೋಟುಗಳು, 2 ಪ್ರಿಂಟಿಂಗ್ ಸ್ಕ್ರೀನ್ಗಳು, ಒಂದು ಕಂಪ್ಯೂಟರ್ ಕೀ ಪ್ಯಾಡ್, ಹೆಚ್ಸಿಎಲ್ ಕಂಪನಿಯ ಸಿಪಿಯು, ವಿವಿಧ ಬಣ್ಣದ ಇಂಕ್ ಡಬ್ಬಗಳು, 500 ಹಾಗೂ 200 ಮುಖಬೆಲೆಯ ಸ್ಕ್ರೀನ್ ಹಾಳೆಗಳು, ಪೆನ್ ಡೆವ್ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಖೋಟಾನೋಟು ಚಲಾವಣೆ ಗೊತ್ತಾಗಿದ್ದು ಹೇಗೆ ?
ಆರೋಪಿಗಳ ಪೈಕಿ ಜಮಾಲ್ ಕೆಲಸ ನಿಮಿತ್ತ ನಿನ್ನೆ ಮಧ್ಯಾಹ್ನ ಸಿ.ಟಿ.ಮಾರ್ಕೆಟ್ನಿಂದ ಶಾಂತಿ ನಗರಕ್ಕೆ ಹೋಗಲು ಮಂಜುನಾಥ್ ಎಂಬುವರ ಆಟೋ ಹತ್ತಿದ್ದಾನೆ. ಶಾಂತಿನಗರದಲ್ಲಿ ಇಳಿದು 50 ರೂ. ನೀಡುವ ಬದಲು 100 ರೂಪಾಯಿ ನೀಡಿದ್ದಾನೆ. ಹಣ ಪಡೆದ ಚಾಲಕ ಮಂಜುನಾಥ್ ಖೋಟಾನೋಟು ಎಂದು ಮನದಲ್ಲಿ ಖಾತ್ರಿಪಡಿಸಿಕೊಂಡು ಚಿಲ್ಲರೆ ಹಣ ನೀಡುವುದಾಗಿ ಹೇಳಿ ನೇರವಾಗಿ ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಖೋಟಾನೋಟಿನ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ: ಪಾದರಾಯನಪುರ ನಿವಾಸಿ ಬಂಧನ
ಚಿಕ್ಕ ಮನೆಯಲ್ಲೇ ಖೋಟಾನೋಟು ಮುದ್ರಣ..!
ಹಲವು ವರ್ಷಗಳಿಂದ ಪಾದರಾಯನಪುರ ಶಾಮಣ್ಣ ಗಾರ್ಡನ್ನಲ್ಲಿರುವ ಇಮ್ರಾನ್ ಮನೆಯಲ್ಲಿ ಖೋಟಾನೋಟು ಮುದ್ರಣವಾಗುತಿತ್ತು. ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಅನುಭವ ಹೊಂದಿದ್ದ ಎರಡನೇ ಆರೋಪಿ ಮುಬಾರಕ್ ಸಹಾಯದಿಂದ ಅಸಲಿ ನೋಟುಗಳಂತೆ ಕಾಣುವ ಹಾಗೇ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರು. ಪ್ರಕರಣದ ಮೂರನೇ ಆರೋಪಿಯಾದ ಜಮಾಲ್ ನಕಲಿ ನೋಟುಗಳ ಚಲಾವಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಮೀಷನ್ ಆಸೆಗೆ ಬಿದ್ದು ನಕಲಿ ನೋಟು ಚಲಾವಣೆ
ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದ ಜಮಾಲ್, ಇಮ್ರಾನ್ನಿಂದ ನೀಡುವ ಕಮೀಷನ್ ಪಡೆದು ಅವ್ಯವಹಾರ ನಡೆಸುತ್ತಿದ್ದ. ಚಲಾವಣೆಗೊಂಡ ಮುಖಬೆಲೆಯ ಶೇ.10ರಷ್ಟು ಕಮೀಷನ್ ಪಡೆದುಕೊಳ್ಳುತ್ತಿದ್ದ. ಸದ್ಯ ಮೂವರನ್ನು 12 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ನಕಲಿ ನೋಟುಗಳ ಜಾಲ ಪತ್ತೆಗೆ ಕಾರಣರಾದ ಹಾಗೂ ಸಾಮಾಜಿಕ ಪ್ರಜ್ಞೆ ಮೆರೆದ ಆಟೋ ಚಾಲಕ ಮಂಜುನಾಥ್ 10 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಅನುಚೇತ್ ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಓರ್ವ ವ್ಯಕ್ತಿ ಆಟೋದಲ್ಲಿ ಸಿಟಿ ಮಾರ್ಕೆಟ್ನಿಂದ ಶಾಂತಿನಗರಕ್ಕೆ ಬಂದಿದ್ದ. ಈ ವೇಳೆ ಆಟೋ ಡ್ರೈವರ್ಗೆ ಜಮಾಲ್ 100 ರೂ. ಹಣ ನೀಡಿದ್ದ ಆಟೋ ಚಾಲಕನಿಗೆ ನೋಟ್ ಬಗ್ಗೆ ಅನುಮಾನ ಬಂದಿದೆ. ಕೂಡಲೇ ಮಂಜುನಾಥ್ ಆತನನ್ನು ಸ್ಟೇಷನ್ಗೆ ಕರೆತಂದು ಒಪ್ಪಿಸಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಸದ್ಯದವರೆಗೂ ಹಾಲಿ ಶಾಸಕರ ವಿಚಾರವಾಗಿ ಯಾವುದೇ ವಿಚಾರ ಇಲ್ಲ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಅನುಚೇತ್ ಮಾಹಿತಿ ನೀಡಿದ್ದಾರೆ.