ಬೆಂಗಳೂರು: ವಾಹನ ದಟ್ಟಣೆ ನಿಯಂತ್ರಣ ಸಂಬಂಧ ಇರುವ ಎಲ್ಲಾ ಯೋಜನೆಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವಂತೆ ಐಟಿ, ಬಿಟಿ ಉದ್ಯಮಿಗಳು ಸಲಹೆ ನೀಡಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇವತ್ತಿನ ಸಭೆಯನ್ನು ಸಿಎಂ ತೆಗೆದು ಕೊಳ್ಳಬೇಕಿತ್ತು. ಆದರೆ ನೆರೆಸಂತ್ರಸ್ಥರ ಪ್ರದೇಶಗಳಿಗೆ ಸಿಎಂ ಹೋಗಿರುವ ಕಾರಣ. ಅವರು ಈ ಸಭೆ ನಡೆಸಲು ಆಗಲಿಲ್ಲ. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ವಿವಿಧ ಇಲಾಖೆಯ ಮುಖ್ಯಸ್ಥರು ಇಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ಐಟಿ, ಬಿಟಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಅವರು ಕೆಲವೊಂದಿಷ್ಟು ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ಸಿಎಂ ಜೊತೆ ಚರ್ಚಿಸಿ, ಬಗೆಹರಿಸುವ ಕೆಲಸ ಮಾಡುತ್ತೇವೆ. ಟ್ರಾಫಿಕ್, ರಸ್ತೆ ಸಮಸ್ಯೆಗಳು ಪ್ರಮುಖ ಆಗಿವೆ. ಇದು ಹಳೇ ವಿಚಾರ ಆದರೂ, ಸಂಬಂಧಪಟ್ಟ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಪರಿಷ್ಕೃತ ಮಾಸ್ಟರ್ ಪ್ಲಾನ್ನಲ್ಲಿ ಸಮಸ್ಯೆಗಳಿರುವ ಬಗ್ಗೆ ಚರ್ಚೆ ಆಯ್ತು. ಪರಿಷ್ಕೃತ ಮಾಸ್ಟರ್ ಪ್ಲಾನ್ ಬಗ್ಗೆ ಹಲವರಿಗೆ ಆಕ್ಷೇಪ ಇದೆ. ಈ ಸಂಬಂಧ ಮರು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಸ್ಬಲ್ಪ ಬದಲಾವಣೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಕುರಿತು ಸಿಎಂ ಬಳಿ ಚರ್ಚೆ ಮಾಡಿ ಕಾರ್ಯರೂಪಕ್ಕೆ ತರೋ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
10 ಸಾವಿರ ಎಲೆಕ್ಟ್ರಿಕಲ್ ಬಸ್ ಖರೀದಿ, ಸಬ್ ಸರ್ಬನ್ ರೈಲು ಯೋಜನೆ ಅನುಷ್ಠಾನ, ಮೆಟ್ರೋ ಯೋಜನೆ ವಿಸ್ತರಣೆ, ತ್ವರಿತ ಗತಿಯ ಕಾಮಗಾರಿ, ಫೆರಿಪೆರಲ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಅಂಡರ್ ಪಾಸ್ ನಿರ್ಮಾಣ ಸಂಬಂಧ ಚರ್ಚೆ ನಡೆಯಿತು. ಇದಕ್ಕೆ ಬೇಕಾದ ಭೂಸ್ವಾಧಿನ ಸಮಸ್ಯೆ ನಿವಾರಣೆ ಹೇಗೆ ಎಂಬ ಬಗ್ಗೆಯೂ ಸಲಹೆಗಳು ಬಂದಿವೆ. ಎಲೆವೇಟೆಡ್ ಕಾರಿಡಾರ್ ಸಂಬಂಧ ಎಲ್ಲರ ಜತೆ ಚರ್ಚಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಯತ್ನಿಸಲಾಗುತ್ತದೆ. ಎಲ್ಲವನ್ನೂ ಮುಖ್ಯಮಂತ್ರಿಗಳ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.