ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಸಾರಿಗೆ ಇಲಾಖೆ ನೀಡಿದೆ. 2021 ಏಪ್ರಿಲ್ ತಿಂಗಳ ಮಾಸಿಕ ಪಾಸುಗಳನ್ನು ಪ್ರಯಾಣಿಕರು ಮುಷ್ಕರದ ಅವಧಿಯಲ್ಲಿ ಹಾಗೂ ಕೋವಿಡ್ 19 ನಿರ್ಬಂಧಿತ ಅವಧಿಯಲ್ಲಿ ಬಳಸದ ಕಾರಣ ಅದರ ಅವಧಿಯನ್ನು ಜುಲೈ 8ರವರೆಗೆ ವಿಸ್ತರಿಸಿದೆ.
ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್‌ಗಳ ಮಾನ್ಯತಾ ಅವಧಿಯನ್ನು (ಸಂಸ್ಥೆಯ ಗುರುತಿನ ಚೀಟಿಯೊಂದಿಗೆ) ಜುಲೈ 8 ರವರೆಗೆ ವಿಸ್ತರಿಸಲಾಗಿದೆ ಎಂದು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 7 ರಿಂದ ಸಂಸ್ಥೆಯ ಕೆಲವು ಸಿಬ್ಬಂದಿ ಮುಷ್ಕರ ನಡೆಸಿದ್ದು, 21 ರವರೆಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿತ್ತು. ಆದ್ದರಿಂದ ಏಪ್ರಿಲ್ ಪಾಸ್ ಅವಧಿಯನ್ನು ಮೇ 16 ರವರೆಗೆ ಈ ಹಿಂದೆ ವಿಸ್ತರಿಸಲಾಗಿತ್ತು. ರಾಜ್ಯದಲ್ಲಿ ನಿಯಂತ್ರಣ ಮೀರಿ ಹರಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಹಾಗೂ ಸೋಂಕಿನ ಸರಪಳಿಯನ್ನು ಮುರಿಯಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಜೂನ್ 20 ರವರೆಗೆ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಇದೀಗ ನಾಳೆಯಿಂದ ಬಸ್ಗಳು ರಸ್ತೆಗಿಳಿಯಲಿದ್ದು, ಪ್ರಯಾಣಿಕರು ತಾವು ಏಪ್ರಿಲ್ ನಲ್ಲಿ ಪಡೆದಿದ್ದ ಪಾಸ್ಗಳನ್ನೇ ಜುಲೈ 8ರವರೆಗೆ ಬಳಸಬಹುದಾಗಿದೆ. ಸದ್ಯಕ್ಕೆ ಹೊಸ ಪಾಸ್ಗಳನ್ನು ಮಾಡಿಸುವುದರಿಂದ ರಿಲೀಫ್ ಸಿಕ್ಕಂತಾಗಿದೆ.