ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಮುಕ್ತನಾಗಿ ಹೊರಬರುವವರೆಗೂ ಸಂಪುಟದಿಂದ ಹೊರಗಿರುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದು, ನಾಳೆ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಸುದ್ದಿಗಾರರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು.
ಇದು ಸಂಜೆ ಸಚಿವ ಕೆ.ಎಸ್ ಈಶ್ವರಪ್ಪ ನನಗೆ ದೂರವಾಣಿ ಕರೆ ಮಾಡಿದ್ದರು, ಆ ವೇಳೆ ರಾಜೀನಾಮೆ ಕೊಡುತ್ತೇನೆ ಅಂತಾ ಹೇಳಿದರು. ನಾನು ನಿರ್ದೋಷಿ, ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಆದರೂ ಇದನ್ನು ಮುಂದುವರೆಸಿಕೊಂಡು ಹೋದರೆ ಅನಗತ್ಯವಾಗಿ ಇತರರಿಗೆ ಮಾತನಾಡಲು ಅವಕಾಶ ಕೊಟ್ಟಂತಾಗಲಿದೆ. ಅಲ್ಲದೆ ಪಕ್ಷದಲ್ಲಿ ಇರಿಸುಮುರಿಸಾಗಬಹುದು. ಹೀಗಾಗಿ ನನ್ನ ಮೇಲೆ ನನಗೆ ನಂಬಿಕೆ ಇದೆ. ಆರೋಪ ಮುಕ್ತನಾಗಿ ಹೊರಬರುತ್ತೇನೆ, ಆದಷ್ಟು ಬೇಗ ತನಿಖೆ ಮುಗಿಯಲಿ, ಸಂಪೂರ್ಣ ತನಿಖೆ ಬಳಿಕ ಉತ್ತರ ಕೊಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.
ನಾಳೆ ಸಂಜೆ ಭೇಟಿಯಾಗುವಂತೆ ಈಶ್ವರಪ್ಪ ಅವರಿಗೆ ತಿಳಿಸಿದ್ದೇನೆ, ಅವರು ಬಂದು ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ. ಆದರೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ನವರಿಗೆ ನೈತಿಕತೆ ಇಲ್ಲ ಎಂದು ಸಿಎಂ ಕಿಡಿಕಾರಿದರು. ಇದಕ್ಕೂ ಮುನ್ನ, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ