ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ ಶಾಲಾ ಮಕ್ಕಳಿಗೆ ದಾಖಲಾತಿ ಕೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳ ಮಕ್ಕಳಿಗೆ ಶಾಲೆಯ ದಾಖಲೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆ ಕೇಳಕೂಡದು ಈ ಸಂಬಂಧ ಸರ್ಕಾರದಿಂದ ಡಿಸಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಬೆಳಗಾವಿ, ಚಿಕ್ಕೋಡಿ ಸೇರಿ ಎಲ್ಲ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇನ್ನು, ನೆರೆಯಿಂದ ಮಕ್ಕಳ ಪಠ್ಯ ಪುಸ್ತಕಗಳು, ನೋಟ್ಬುಕ್ಗಳು ಹಾಳಾಗಿದ್ದು, ಸರ್ಕಾರದಿಂದ ಶಾಲಾ ಮಕ್ಕಳಿಗೆ ಎರಡನೇ ಬಾರಿಗೆ ಪಠ್ಯ ಪುಸ್ತಕಗಳ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು, ನೆರೆಪೀಡಿತ ಪ್ರದೇಶಗಳಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಪ್ರತ್ಯೇಕವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಸಿಎಂಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಸಿಎಂ ಪರಿಹಾರ ನಿಧಿಗೆ 30 ಕೋಟಿ ಕೊಟ್ಟಿದ್ದು, ಪ್ರೌಢ ಶಾಲೆ ಶಿಕ್ಷಕರು 20 ಕೋಟಿ ಕೊಡಲಿದ್ದಾರೆ. ಈ 50 ಕೋಟಿ ಹಣವನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಬಳಸಲು ಶಿಕ್ಷಕರು ಮನವಿ ಮಾಡಿದ್ದು, ಅದಕ್ಕೆ ಸಿಎಂ ಸಮ್ಮತಿ ನೀಡಿದ್ದಾರೆ ಎಂದರು.