ಬೆಂಗಳೂರು: ಇಂಧನ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಮಾಡಿದ ಬಳಿಕ, ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂಧನ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಇಲೆಕ್ಟ್ರಿಕ್ ವಾಹನ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇಲೆಕ್ಟ್ರಿಕ್ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆ ಆಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ಹೇಳಿದರು.

ಇವಿ ಚಾರ್ಜಿಂಗ್ ಸೆಂಟರ್ಗಳ ಅಭಿಯಾನ: ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಜೂ.23 ರಿಂದ ಜೂ. 30ರವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

3000 ಚಾರ್ಜಿಂಗ್ ಸ್ಟೇಷನ್: ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ಗಳಿದ್ದು, 3000 ಚಾರ್ಜಿಂಗ್ ಸ್ಟೇಷನ್ಗಳ ಗುರಿ ಹೊಂದಲಾಗಿದೆ. ಇನ್ನು ನಗರದಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂಗೆ ನೀಡಲಾಗಿದೆ. ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
22 ಕೋಟಿ ಜನರು ನಗರ ಪ್ರದೇಶಕ್ಕೆ ವಲಸೆ: ಈ ಸಂದರ್ಭದಲ್ಲಿ ಭಾರತದ ಬ್ರಿಟಿಷ್ ಹೈಕಮಿಷನರ್ ಆಲೆಕ್ಸ್ ಇಲ್ಲಿಸ್ ಮಾತನಾಡಿ, ಭಾರತ, ಅಮೆರಿಕ ಮತ್ತು ಚೀನಾ ದೇಶಗಳು ಯುಕೆ ಜತೆ ಸಹಭಾಗಿತ್ವದ ವಹಿವಾಟುವಿನಲ್ಲಿ ತೊಡಗಿಕೊಂಡಿವೆ. ಭಾರತದ ಸುಮಾರು 22 ಕೋಟಿ ಜನರು ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ವಲಸೆ ಹೋಗಲಿದ್ದಾರೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಸಮರ್ಥ ಅಭಿವೃದ್ದಿ ಮುಖ್ಯ ಎಂದು ತಿಳಿಸಿದರು.

ಬ್ರಿಟನ್ ಉತ್ಸುಕತೆ: ಭಾರತದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಬಳಕ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ನಾನು ಮಾತನಾಡಿದ್ದೇನೆ. ಅವರು ಈ ಕುರಿತು ಧನಾತ್ಮಕ ಧೋರಣೆ ಹೊಂದಿದ್ದು, ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಮೋದಿ ನೀಡಿದ್ದಾರೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಇವಿ ಚಲನಶೀಲತೆ ಬಗ್ಗೆ ಭಾಗಿತ್ವ ಹೊಂದಲು ಬ್ರಿಟನ್ ಉತ್ಸುಕತೆ ಹೊಂದಿದೆ ಎಂದು ಅಲೆಕ್ಸ್ ತಿಳಿಸಿದರು.
ಅಭಿವೃದ್ದಿಗಾಗಿ ಕೈ ಜೋಡಿಸಬೇಕಾಗಿದೆ: ನಮ್ಮ ಇತಿಹಾಸ ಪಠ್ಯದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟನ್ ಜತೆ ಹೋರಾಟ ಮಾಡಿದೆ. ನಾವು ಅದನ್ನು ಮರೆತು ಪ್ರಸ್ತುತ ನಮ್ಮ ದೇಶಗಳ ಅಭಿವೃದ್ದಿಗಾಗಿ ಕೈ ಜೋಡಿಸಬೇಕಾಗಿದೆ ಎಂದು ಅಲೆಕ್ಸ್ ಇಲ್ಲಿಸ್ ತಿಳಿಸಿದರು.
ಬಳಕೆಗೆ ಹೆಚ್ಚಿನ ಅವಕಾಶ: ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಅವಕಾಶ ಇದೆ ಎಂದು ಅವರು ಉಲ್ಲೇಖಿಸಿದರು.
ಬೆಸ್ಕಾಂನಿಂದ ಇವಿ ಚಾರ್ಜಿಂಗ್ ಸ್ಟೇಷನ್: ಬೆಸ್ಕಾಂ ಆಡಳಿತ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಬೆಸ್ಕಾಂ ಸಾರ್ವಜನಿಕರಿಗಾಗಿ ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ತೆರೆದಿದೆ. ಎರಡು ಚಾರ್ಜಿಂಗ್ ಸ್ಟೇಷನ್ಗಳನ್ನು ಬೆಸ್ಕಾಂನ ನಿಗಮ ಕಚೇರಿಗಳಲ್ಲಿ ತೆರೆಯಲಾಗಿದೆ ಎಂದರು.
6 ಸಾವಿರಕ್ಕೂ ಹೆಚ್ಚು ವಹಿವಾಟು: ಪ್ರಸ್ತುತವಿರುವ ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳಿಂದ ತಿಂಗಳಿಗೆ 6 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ. ಸುಮಾರು 30,000 ಕಿ.ವ್ಯಾಟ್ ಇಂಧನ ಮಾರಾಟ ಮಾಡಿ, 2.5 ಲಕ್ಷ ರೂ, ಆದಾಯ ಗಳಿಸುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಅನ್ನಾ ಶೋಟ್ ಬೋಲ್ಟ್, ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಮತ್ತು ಕೆಪಿಟಿಸಿಎಲ್ ಆಡಳಿತ ನಿರ್ದೇಶಕ ಡಾ. ಎನ್. ಮಂಜುಳಾ ಹಾಜರಿದ್ದರು.
ಇದನ್ನೂ ಓದಿ: R&D ನೀತಿ ಅನುಷ್ಠಾನಕ್ಕೆ ತರುವ ಮುಂಚೂಣಿ ಸಂಸ್ಥೆಯಾಗಿ ಯುವಿಸಿಇ ಬೆಳೆಯಲಿ: ಸಿಎಂ ಬೊಮ್ಮಾಯಿ ಕರೆ