ಬೆಂಗಳೂರು : ಆಗಸ್ಟ್ 23ರಿಂದ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳನ್ನು ಪುನಾರಂಭ ಮಾಡಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಶಾಲೆ ಪುನಾರಂಭದ ಪೂರ್ವ ಸಿದ್ಧತೆ ಪರಿಶೀಲನೆ ಸಂಬಂಧ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಶಾಲೆ ಆವರಣದಲ್ಲಿ ಶುಚಿತ್ವ ಅತಿ ಮುಖ್ಯ. ಶೌಚಗೃಹ, ಶಾಲಾ ಆವರಣ, ಕೊಠಡಿಗಳು ಸೇರಿದಂತೆ ಎಲ್ಲಾ ಕಡೆ ಶುಚಿತ್ವ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಶುಚಿತ್ವ ಮತ್ತು ಸುರಕ್ಷತೆ ನಿರಂತರವಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆ ಕೊಠಡಿಗಳು, ಆವರಣ, ಶೌಚಗೃಹ ಸೇರಿದಂತೆ ಕೊಠಡಿಗಳು, ಬೆಂಚುಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ಕುರಿತು ಶಿಕ್ಷಕರಿಗೆ ಮಾಹಿತಿಯನ್ನು ನೀಡಿ, ತಿಳಿ ಹೇಳಲಾಗಿದೆ. ಮಕ್ಕಳು ಸಹಿತ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳಿಗೆ ಕುಡಿಯಲು ಬಿಸಿ ನೀರು ಒದಗಿಸಬೇಕು. ಸಾಧ್ಯವಾದರೆ ಮಕ್ಕಳೇ ಮನೆಯಿಂದ ಬಿಸಿ ನೀರು ತಂದುಕೊಂಡರೆ ಉತ್ತಮ. ಕೆಲವು ದಿನಗಳಲ್ಲಿ ಈ ಎಲ್ಲಾ ವಿಚಾರಗಳು ಸರಿ ಹೋಗುತ್ತವೆ. ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳು ಪರಿಪಾಲನೆಯಾಗುತ್ತಿರುವ ಕುರಿತು ಬಿಇಒಗಳು ತಮ್ಮ ವ್ಯಾಪ್ತಿಯ ಕನಿಷ್ಠ ಶೇ.50ರಷ್ಟು ಶಾಲೆಗಳಿಗಾದರೂ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಕೊಠಡಿ ಕೊರತೆಯಾದರೆ ಸಿಬ್ಬಂದಿ ಕೊಠಡಿ ಬಳಸಿಕೊಳ್ಳಬೇಕು. ಈ ಮೂಲಕ ಶಾಲೆಗಳು ಪುನಾರಂಭ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಕೋವಿಡ್ ಲಸಿಕೆ ಕಡ್ಡಾಯ..
ಶಾಲೆ ಆರಂಭಿಸಲು ಮಕ್ಕಳು ಮತ್ತು ಪಾಲಕರ ಅಭಿಪ್ರಾಯವನ್ನು ಬಿಇಒಗಳು ಸಂಗ್ರಹಿಸಿದ್ದು, ಪಾಲಕರು ಶಾಲೆ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಕ್ಕಳು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಭೌತಿಕ ಶಿಕ್ಷಣ ಸಿಗದೆ ಮಕ್ಕಳು ಬೇಸರಗೊಂಡಿದ್ದಾರೆ. ಮಕ್ಕಳನ್ನು ಕಳುಹಿಸುತ್ತೇವೆ. ಬೇಗ ಆರಂಭಿಸಿ ಎಂದು ಕೇಳುತ್ತಿದ್ದಾರೆ. ಮಕ್ಕಳ ಪಾಲಕರು ಮತ್ತು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ಲಸಿಕೆ ಪಡೆಯದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ ಎಂದು ಕೇಳುತ್ತಿದ್ದಾರೆ. ಆದರೆ, ಅದಕ್ಕೆ ಅವಕಾಶ ನೀಡಲಾಗದು. ಲಸಿಕೆ ಪಡೆಯಲು ಇನ್ನೂ ಸಮಯಾವಕಾಶ ಇದೆ. ಲಸಿಕೆ ಲಭ್ಯತೆ ಇರುವ ಕಾರಣ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಕೋವಿಡ್-19ನಿಂದ ಸುರಕ್ಷತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಇಲಾಖೆಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ಬಿಇಒಗಳಿಗೆ ಸೂಚಿಸಿದರು.
ವಯೋಮಿತಿ ಸಹಿತ ಕೋವಿಡ್ ಪ್ರಕರಣಗಳ ಮಾಹಿತಿ
8, 9ನೇ ತರಗತಿಗಳು ಮತ್ತು ಪಿಯು ಕಾಲೇಜು ಆರಂಭಿಸಿದ ಬಳಿಕ ಬರುವ ಪ್ರತಿಕ್ರಿಯೆಗಳು 1ರಿಂದ 8ನೇ ತರಗತಿವರೆಗಿನ ಶಾಲೆ ಪುನಾರಂಭಿಸಲು ನೆರವಾಗುತ್ತವೆ. ಹೀಗಾಗಿ, ರಾಜ್ಯದ ಎಲ್ಲಾ ಗ್ರಾಮ, ಪಟ್ಟಣ, ತಾಲೂಕು, ನಗರಗಳಲ್ಲಿ ವಯೋಮಿತಿ ಸಹಿತ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಮಾಹಿತಿ ಸಂಗ್ರಹಿಸುವುದರಿಂದ ಮಕ್ಕಳಲ್ಲಿ ಕೋವಿಡ್ ಪ್ರಮಾಣ ಎಷ್ಟಿದೆ ಎಂಬುದರ ಚಿತ್ರಣ ಸಿಗುತ್ತದೆ.
ಆರೋಗ್ಯ ಇಲಾಖೆಯಲ್ಲಿ ಈ ಮಾಹಿತಿ ಇದ್ದು, ಅದನ್ನು ಸಂಗ್ರಹಿಸಿ ಅಧ್ಯಯನ ಮಾಡಿದರೆ 1ರಿಂದ 8ನೇ ತರಗತಿ ಶಾಲೆ ಆರಂಭಿಸಲು ಸೂಕ್ತ ಸಿದ್ಧತೆ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಚಿಂದಿ ಆಯುವ ಮಹಿಳೆಯ ಇಂಗ್ಲಿಷ್ ಕೌಶಲ್ಯ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ವಿಡಿಯೋ
ಇನ್ನು ನೆಟ್‌ವರ್ಕ್ ಸಮಸ್ಯೆ, ಮೊಬೈಲ್, ಲ್ಯಾಪ್‌ಟಾಪ್ ಕೊರತೆ ಕಾರಣ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಾಲ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ವಿವಾಹವಾಗಿದ್ದಾರೆ ಎಂಬ ಮಾಹಿತಿ ಹಲವು ಸರ್ವೇಗಳಿಂದ ಬೆಳಕಿಗೆ ಬಂದಿದೆ. ಮಕ್ಕಳ ಶೈಕ್ಷಣಿಕ ಜೀವನ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ. ಯಾರಾದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿದರೆ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಬಿಇಒಗಳಿಗೆ ಸಚಿವ ಬಿ.ಸಿ ನಾಗೇಶ್ ಸೂಚಿಸಿದ್ದಾರೆ.