ಬೆಂಗಳೂರು: ಇಲ್ಲೊಬ್ಬ ಭೂಪ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಲ್ಲದೇ, ಕುಡಿದ ಮತ್ತಿನಲ್ಲಿ ಪೊಲೀಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇಷ್ಟು ಮಾತ್ರವಲ್ಲದೇ ಜಪ್ತಿ ಮಾಡಿಕೊಂಡ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಇಟ್ಟಿರುವುದಾಗಿ ಸುಳ್ಳು ಹೇಳಿ ಪೊಲೀಸರನ್ನೇ ಯಾಮಾರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 6ನೇ ತಾರೀಖಿನಂದು ಬೆಂಗಳೂರಿನ ಎಚ್ಎಂಟಿ ಲೇಔಟ್ ಬಳಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದಯಾನಂದ್ ಸಾಗರ್ ಎಂಬುವವರು ಕಾರನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಕುಡಿದು ವಾಹನ ಚಲಾಯಿಸುತ್ತಿದ್ದುದು ಕಂಡುಬಂದಿದೆ. ಈ ವೇಳೆ ಕಾರು ಜಪ್ತಿಗೆ ಪೊಲೀಸರರು ಮುಂದಾಗಿದ್ದಾರೆ. ಕುಡಿದ ಮತ್ತಿನಲ್ಲಿದ್ದ ದಯಾನಂದ್ ಸಾಗರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕಾರು ಜಪ್ತಿಗೆ ವಿರೋಧಿಸಿದ್ದಾನೆ.
ವಿರೋಧದ ಮಧ್ಯೆಯೂ ಪೊಲೀಸರು ಕಾರು ಜಪ್ತಿ ಮಾಡಿ ದಯಾನಂದ್ನನ್ನು ಮನೆಗೆ ಕಳುಹಿಸಿದ್ದಾರೆ. ಬಳಿಕ ಮನೆಗೆ ತೆರಳಿದ ಆರೋಪಿ ದಯಾನಂದ್ ಸಾಗರ್ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ಪೊಲೀಸರಿಗೆ ಕರೆ ಮಾಡಿ ನನ್ನ ಕಾರಿನಲ್ಲಿ 1.24 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿವೆ. ಅವು ಕಳೆದರೆ ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವೆ ಎಂದು ದಬಾಯಿಸಿದ್ದಾನೆ.
ಇದರಿಂದ ಗಲಿಬಿಲಿಗೊಂಡ ಪೊಲೀಸರು ಕಾರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಚಿನ್ನಾಭರಣ ಪತ್ತೆಯಾಗಿಲ್ಲ. ಈ ಸಂಬಂಧ ಆರೋಪಿ ದಯಾನಂದ್ ಸಾಗರ್ ವಿರುದ್ಧ ನಿಂದನೆ, ವಂಚನೆಯಡಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.