ಬೆಂಗಳೂರು: ವಿದ್ಯಾಗಮ ಯೋಜನೆಯಿಂದ ಕೊರೊನಾ ಸೋಂಕು ಬಂದಿದೆಯಾ, ಇಲ್ಲವೇ ಎಂದು ಅಧಿಕಾರಿಗಳ ವರದಿ ಪಡೆಯುತ್ತೇವೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಚರ್ಚೆ ಮಾಡಿ ತಜ್ಞರ ಸಮಿತಿ ರಚನೆ ಬಗ್ಗೆ ತೀರ್ಮಾನ ಮಾಡುತ್ತೇವೆ. ವಿದ್ಯಾಗಮ ಯೋಜನೆಯ ಲೋಪಗಳು, ಸೋಂಕು ಬರಲು ಸಾಧ್ಯ ಇದೆಯಾ ಮತ್ತು ಇತರ ವಿಚಾರಗಳ ಬಗ್ಗೆ ವರದಿ ಕೊಡಲು ಹೇಳುತ್ತೇವೆ ಎಂದರು.
ಶಾಲೆಗಳ ಪುನಾರಂಭ, ವಿದ್ಯಾಗಮ ಬೇಡ ಎಂಬ ವಿಚಾರದಲ್ಲಿ ಸರ್ಕಾರಕ್ಕೆ ಯಾವುದು ಮುಖ್ಯ ಎಂದು ಗೊತ್ತಿದೆ. ಮೊದಲು ಶಾಲೆಗಳನ್ನು ಮುಚ್ಚಿದ್ದೇ ನಮ್ಮ ರಾಜ್ಯದಲ್ಲಿ, ಈಗ ಪೋಷಕರು ಸಾಕಷ್ಟು ಒತ್ತಾಯಗಳನ್ನು ಮಾಡುತ್ತಿದ್ದಾರೆ. ನಮ್ಮೂರುಗಳಿಗೆ ಮೇಷ್ಟ್ರುಗಳನ್ನು ಕಳುಹಿಸಿಕೊಡಿ ಎಂದು ಗ್ರಾಮೀಣ ಜನ ಒತ್ತಾಯಿಸಿದ್ದರು. ಆದರೆ, ವಿದ್ಯಾಗಮ ಯೋಜನೆಯಿಂದ ಶಿಕ್ಷಕರಿಗೆ, ಮಕ್ಕಳಿಗೆ ಸೋಂಕು ಬಂದಿದೆ ಅಂತ ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ನಿರ್ದಿಷ್ಟವಾಗಿ ಎಷ್ಟು ಶಿಕ್ಷಕರಿಗೆ ಸೋಂಕು ಬಂದಿದೆ, ಎಷ್ಟು ಶಿಕ್ಷಕರು ನಿಧನರಾಗಿದ್ದಾರೆ ಅನ್ನೋ ಬಗ್ಗೆ ತನಿಖೆ ಆಗಬೇಕು ಎಂದರು.
ವಿದ್ಯಾಗಮ ಯೋಜನೆ ಮತ್ತು ಪುನರ್ಮನನ ಯೋಜನೆಗಳಿಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಬೇರೆ ರಾಜ್ಯಗಳು ಇವುಗಳ ಅಳವಡಿಕೆಗೆ ಆಸಕ್ತಿ ತೋರಿಸಿವೆ. ಆದರೆ ವಿದ್ಯಾಗಮ ಯೋಜನೆಯಲ್ಲಿ ಲೋಪಗಳಿದ್ದರೆ, ವಿದ್ಯಾಗಮ ಯೋಜನೆಯಿಂದಲೇ ಸೋಂಕು ಬಂದಿದೆ ಅಂದರೆ ಯೋಜನೆ ನಿಲ್ಲಿಸೋಣ. ಯೋಜನೆ ನಿಲ್ಲಿಸೋದರಿಂದ ಸಮಸ್ಯೆಯೇನೂ ಆಗಲ್ಲ. ನಮಗೆ ಮಕ್ಕಳು, ಶಿಕ್ಷಕರ ಆರೋಗ್ಯ ಮುಖ್ಯ ಎಂದರು.