ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆನ್ಲೈನ್ ಮೂಲಕ ಚಾಲನೆ ಪರವಾನಗಿ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇಶಾದ್ಯಂತ ಏಕರೂಪ ಆನ್ಲೈನ್ ಯೋಜನೆಯನ್ನು ಆರ್ಟಿಒ ಕಚೇರಿಗೆ ಯೋಜನೆ ಜಾರಿಗೆ ತರಲಾಗಿದೆ. ಸಾರಥಿ ವೆಬ್ ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಶನ್ ಇದ್ದು, ಇದರಲ್ಲಿ ಎಲ್ಎಲ್ಆರ್, ಡಿಎಲ್ ಅಥವಾ ಇತರ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯಬಹುದಾಗಿದೆ.
ಈ ಹಿಂದೆ ಎಲ್ಎಲ್ಆರ್ ಅಥವಾ ಡಿಎಲ್ ಪಡೆಯಬೇಕಾಗಿದ್ದರೆ ಎಲ್ಲಿಲ್ಲದ ಹರಸಾಹಸ ಪಡಬೇಕಾಗಿತ್ತು. ಇದರ ಮಧ್ಯೆ ದಲ್ಲಾಳಿಗಳ ಹಾವಳಿ ಬೇರೆ. ಅವರು ಹೇಳಿದ ದರ ಹಾಗೂ ಅವರು ಕೊಟ್ಟ ದಿನಾಂಕಕ್ಕೆ ಹೋಗಬೇಕು. ಹಾಗೂ ಮುಖ್ಯವಾಗಿ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಈ ಸೇವೆಯನ್ನು ಸರ್ಕಾರ ರೂಪಿಸಿದೆ.
ಇದಕ್ಕೆ ಇಲಾಖೆಯೇ ವೆಬ್ಸೈಟ್ ತೆರೆದಿದ್ದು, ಸಾರ್ವಜನಿಕರು ಈ ಮೂಲಕ ದಿನದ 24 ಗಂಟೆಯೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜೊತೆಗೆ ದಲ್ಲಾಳಿಗಳ ಕಾಟವೂ ಇರುವುದಿಲ್ಲ. ಹಾಗೂ ಕೆಲಸವೂ ತ್ವರಿತಗತಿಯಲ್ಲಿ ಆಗುತ್ತದೆ. ಸಾರ್ವಜನಿಕರಿಗೆ ಕೊಟ್ಟ ದಿನಾಂಕದಂದು ಕಚೇರಿಗೆ ಬಂದೂ ಟೆಸ್ಟಿಂಗ್ ನೀಡಿ ತಮ್ಮ ಮುಂದಿನ ಕೆಲಸ ನೋಡಿ ಕೊಳ್ಳಬಹುದಾಗಿದೆ.
ಆದರೆ, ಬಹಳ ಜನರು ಆನ್ಲೈನ್ ಮೊರೆ ಹೊಗದೇ ಮಧ್ಯವರ್ತಿಗಳ ಬಳಿ ಸಹಾಯ ಪಡೆದು ಮೋಸ ಹೋಗ್ತಿದ್ದಾರೆ. ಯಾಕಂದ್ರೆ ಸೈಬರ್ ಕಳ್ಳರ ಕಾಟ ಹೆಚ್ಚಾಗಿದ್ದು, ತಮ್ಮ ಹಣ ಎಲ್ಲಿ ಕಳ್ಳರ ಪಾಲಾಗುತ್ತದೆ ಎಂದು ಹೆದರಿ ಮಧ್ಯವರ್ತಿಗಳ ಕೈಗೆ ಸಿಕ್ಕಿಬಿದ್ದು, ಹೆಚ್ಚು ಹಣ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 67ಆರ್ಟಿಒ ಕಚೇರಿಗಳಿವೆ.
ಆನ್ಲೈನ್ ಸೇವೆಗಳ ಮೇಲೆ ಕೆಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿಗಾ ಇಟ್ಟಿದೆ. ಆದರೆ, ಬಹುತೇಕ ಮಂದಿ ಕಂಪ್ಯೂಟರ್, ಸ್ಕ್ಯಾನರ್ ಇಲ್ಲದೇ ಹಾಗೂ ವಂಚಕರಿಗೆ ಹೆದರಿ, ಆರ್ಟಿಒ ಅಧಿಕಾರಿಗಳಿಗೆ ತಿಳಿಸದೇ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಅಧಿಕ ಹಣವನ್ನು ಮಧ್ಯವರ್ತಿಗಳು ಪಡೆದಾಗ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಾರೆ ಎನ್ನುವುದು ಆರ್ಟಿಒ ಇನ್ಸ್ಪೆಕ್ಟರ್ ರಾಜಣ್ಣ ಅವರ ಮಾತು.
ಆನ್ಲೈನ್ ಸೇವೆಯಿಂದ ಕೆಲವರಿಗೆ ಅನುಕೂಲವಾಗಿದ್ದರೆ, ಇನ್ನು ಕೆಲವರಿಗೆ ತೊಂದರೆ ಉಂಟಾಗಿದೆ. ಕಾಗದ ರಹಿತ ಕಚೇರಿ ಕೆಲಸ ಕಾರ್ಯಗಳು ಮಾಡುವ ಕೇಂದ್ರ ಸರ್ಕಾರದ ಯೋಜನೆಯಿಂದ, ಗ್ರಾಮೀಣ ಭಾಗದ ರೈತಾಪಿ ವರ್ಗ ಹಾಗೂ ಹೆಚ್ಚು ಶಿಕ್ಷಣ ಕಲಿಯಲಾರದ ಜನರು ಪರದಾಡುವಂತಾಗಿದೆ. ಎಲ್ಎಲ್ಆರ್ ಅರ್ಜಿ ತುಂಬಿ ಸರ್ಕಾರಕ್ಕೆ 200 ರೂ. ಶುಲ್ಕ ತುಂಬಬೇಕು. ಆನ್ಲೈನ್ ಬರುವ ಮುಂಚೆ ಕೇವಲ 30 ರೂ. ಇತ್ತು. ಈಗ 200 ರೂ. ದರ ನಿಗದಿ ಮಾಡಿದ್ದಾರೆ. ಅದೇ ರೀತಿ ಡಿಎಲ್ಗೆ 750 ರಿಂದ 800 ನಿಗದಿ ಮಾಡಿದ್ದಾರೆ. ಈ ಹಿಂದೆ ಕೇವಲ 200 ರೂ. ತುಂಬಿದರೆ ಡಿಎಲ್ ನೀಡುತ್ತಿದ್ದರು.
ಆನ್ಲೈನ್ನಲ್ಲಿ ಅರ್ಜಿ ತುಂಬಿದ ಬಳಿಕ ಟೆಸ್ಟ್ ಡ್ರೈವಿಂಗ್ಗೆ ಆನ್ಲೈನ್ನಲ್ಲಿ ದಿನಾಂಕ ನಿಗದಿಗೊಳಿಸಲಾಗುತ್ತದೆ. ಅದು ತಿಂಗಳವರೆಗೆ ಮಾತ್ರ ಸಿಮಿತವಾಗಿರುತ್ತದೆ. ಇಂತಹ ಸಮಯದಲ್ಲಿ ಏನಾದರೂ ಅಡಚಣೆಯಾಗಿ ಗೈರು ಉಳಿದರೆ, ಮತ್ತೆ ಆನ್ಲೈನ್ನಲ್ಲಿ ಅರ್ಜಿ ತುಂಬಿ ಮತ್ತೆ ದಿನಾಂಕ ನಿಗದಿಗೊಳಿಸಬೇಕಾಗುತ್ತದೆ. ಇದು ಗ್ರಾಮೀಣ ಪ್ರದೇಶದ ಜನತೆಗೆ ಹಾಗೂ ರೈತಾಪಿ ವರ್ಗಗವರಿಗೆ ಕಷ್ಟದ ಕೆಲಸವಾಗಲಿದೆ.
ಸುವ್ಯವಸ್ಥಿತವಾಗಿ ಹಣ ಹಾಗೂ ಸಮಯ ಪೋಲಾಗದಂತೆ ಸಾರಿಗೆ ಇಲಾಖೆಯಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿರುವುದು ಸರಿಯಾದ ಕ್ರಮವಾಗಿದೆ. ಆದರೆ, ಗ್ರಾಮೀಣ ಪ್ರದೇಶದವರು ಏಜೆಂಟ್ ಹತ್ತಿರ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕುವಂತೆ ಮತ್ತಷ್ಟು ಬದಲಾವಣೆ ತಂದು ಜನತೆಗೆ ಅನುಕೂಲ ಮಾಡಿಕೂಡುವ ಅಗತ್ಯವಿದೆ.