ಬೆಂಗಳೂರು: ಮತದಾರರ ಪಟ್ಟಿಯನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿರುವ ಅವರು, ಚುನಾವಣಾ ಸಂದರ್ಭದಲ್ಲಿ ಕೆಲವೊಂದು ವರ್ಗಗಳ ಮತದಾರರ ಹೆಸರು ಕೊನೆಯ ಗಳಿಗೆಯಲ್ಲಿ ಮತದಾರರ ಪಟ್ಟಿಯಿಂದ ಮಾಯವಾಗಿರುವ ಘಟನೆಗಳು ವ್ಯಾಪಕವಾಗಿ ನಡೆದಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ರಾಜಕೀಯ ಪಕ್ಷವೊಂದರ ಅಂಗ ಸಂಸ್ಥೆಗಳು ಮುದ್ರಣ ಸಂಸ್ಥೆಗಳ ಮೂಲಕ ಈ ರೀತಿಯ ಅವ್ಯವಹಾರ ನಡೆಸುತ್ತಿರುವ ಆರೋಪಗಳಿವೆ. ಕೊನೆ ಹಂತದಲ್ಲಿ ಮತದಾರರ ಅಂತಿಮ ಪಟ್ಟಿ ಹೊರ ಬರುವ ಕಾರಣದಿಂದಾಗಿ ಇತರ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಮಯಾವಕಾಶ ಇರುವುದಿಲ್ಲ. ಹಾಗಾಗಿ ಈ ಮಹಾಮೋಸದ ಪಟ್ಟಿಯನ್ವಯವೇ ಚುನಾವಣೆ ನಡೆದು ಹೋಗುತ್ತದೆ ಎಂದು ದೂರಿದ್ದಾರೆ.
ಇದು ಮಹಾ ಪ್ರಮಾದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗುವ ಘೋರ ಅಪಚಾರ. ಮತದಾರರ ಪಟ್ಟಿಯನ್ನು ಖಾಸಗಿ ಮುದ್ರಣಾಲಯಗಳ ಮುಖಾಂತರ ಮುದ್ರಿಸುತ್ತಿರುವುದರಿಂದಾಗಿ ಇಂತಹ ಪ್ರಮಾದಗಳಿಗೆ ಅವಕಾಶ ದೊರೆಯುತ್ತಿದೆ. ಹಾಗಾಗಿ ಪಾರದರ್ಶಕತೆ ಇರುವುದಿಲ್ಲ ಮತ್ತು ತಪ್ಪಿತಸ್ತರ ವಿರುದ್ಧ ಶಿಸ್ತುಕ್ರಮ, ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕಡಿದು ಕೊನೆಯ ಘಟ್ಟದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸಾಧ್ಯತೆಗಳು ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಚುನಾವಣೆಗಳನ್ನು ಯಾವುದೇ ಸಂಶಯಕ್ಕೂ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಿಕೊಡುವ ಅತ್ಯಂತ ಪ್ರಮುಖ ಜವಾಬ್ದಾರಿ ಇರುವುದರಿಂದ, ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯನ್ನು ಮುದ್ರಿಸುವ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದು ಹಾಗೂ ಮತದಾರರ ಪಟ್ಟಿಯನ್ನು ಸರ್ಕಾರಿ ಮುದ್ರಣಾಲಯಗಳಲ್ಲೇ ಮುದ್ರಿಸುವ ವ್ಯವಸ್ಥೆಯನ್ನು ಮಾಡಬೇಕಾಗಿ ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.