ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮ ಹನುಮಂತರಾಯಪ್ಪ ಪರ ಕ್ಷೇತ್ರದ ವಿವಿಧೆಡೆ ಸಂಚರಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ನಾಗರಬಾವಿಯ ಅಗಸರ (ಡೋಬಿ) ಅಂಗಡಿಗೆ ಭೇಟಿ ನೀಡಿ, ಅಂಗಡಿ ಮಾಲೀಕನ ಅಹವಾಲು ಆಲಿಸಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಿಂದ ಒಂದು ಪೈಸೆ ಕೂಡ ನೆರವು ಸಿಕ್ಕಿಲ್ಲ. ಸರ್ಕಾರದ ಘೋಷಣೆ ಕೇವಲ ಘೋಷಣೆಯಾಗಿ ಉಳಿಯಿತು ಎಂದು ಅಂಗಡಿ ಮಾಲೀಕ ತಮ್ಮ ನೋವು ತೋಡಿಕೊಂಡರು.
ಮಧ್ಯಾಹ್ನದ ನಂತರ ಅಭ್ಯರ್ಥಿ ಜೊತೆ ಡಿಕೆ ಶಿವಕುಮಾರ್ ಪ್ರಚಾರ ಕಾರ್ಯ ನಡೆಸಿದರು. ಆದರೆ ಬೆಳಿಗ್ಗಿನಿಂದಲೇ ಪ್ರಚಾರ ಆರಂಭಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಅವರು ಮುಂಜಾನೆಯ ವಾಯುವಿಹಾರಿಗಳ ಬಳಿ ಮತಯಾಚಿಸಿದರು. ಇದೇ ಸಂದರ್ಭ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಕುರಿತು ಕೂಡ ಜನರಿಂದ ಮಾಹಿತಿ ಪಡೆದರು.
ಪಕ್ಷ ಸೇರ್ಪಡೆ: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಲಗ್ಗೆರೆಯ ಬಿಜೆಪಿ ಮುಖಂಡ ಎಂ.ಎನ್. ಗಂಗಾಧರ್ ನೇತೃತ್ವದಲ್ಲಿ ಅವರ ಅನೇಕ ಬೆಂಬಲಿಗರು, ನಾಯಕರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ಗೆ ಸೇರ್ಪಡೆಯಾದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ-ಮುಖಂಡ ಹನುಮಂತರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿದ್ದರು.