ದೊಡ್ಡಬಳ್ಳಾಪುರ: ಬಿಜೆಪಿ ಪಕ್ಷ ಜನಾಶೀರ್ವಾದ ಹೆಸರಿನಲ್ಲಿ ಕೇಂದ್ರ ಸಚಿವರು ಸಭೆ ಸಮಾರಂಭ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ದೇವರಾಜ್ ಅರಸ್ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಈ ಮೂಲಕ ಬಿಜೆಪಿ ಸರ್ಕಾರ ರಾಜಕೀಯ ಸಭೆ ಸಮಾರಂಭ ನಡೆಸುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಮತ್ತು ಕೊನಘಟ್ಟ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆರು ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ ಸಮಾರಂಭವನ್ನು ಕಾಂಗ್ರೆಸ್ ಪಕ್ಷ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗವಹಿಸಿ, ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಕೇಂದ್ರ ಸಚಿವರು ನಡೆಸುತ್ತಿರುವ ಜನಾಶೀರ್ವಾದ ಸಭೆಗಳ ಬಗ್ಗೆ ಮಾತನಾಡಿದರು.
ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು:
ಜನಾಶೀರ್ವಾದ ಸಭೆ ಮಾಡುತ್ತಿರುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ರಾಜಕೀಯ ಸಭೆ ಮಾಡಬಾರದೆಂದು ಸರ್ಕಾರ ನಿಯಮ ಮಾಡುತ್ತದೆ. ಆದರೆ ಕೇಂದ್ರ ಸಚಿವರು ಜನಾಶೀರ್ವಾದ ಸಭೆಗಳನ್ನು ಮಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ದೇವರಾಜು ಅರಸು ಜನ್ಮದಿಚಾರಣೆ ಮಾಡಲು ಅಂಬೇಡ್ಕರ್ ಭವನ ಬುಕ್ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಕಾರ್ಯಕ್ರಮ ಮಾಡಲು ಅನುಮತಿ ನೀಡಿಲ್ಲ.
ಸಭೆ ಸಮಾರಂಭ ನಡೆಸುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜೊತೆಗೆ ಅಧಿಕಾರ ದುರುಪಯೋಗವನ್ನು ಸಹ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ನಿಯಮಗಳನ್ನು ಮಾಡಿ, ಆದರೆ ಮಾಡಿದ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಎಂದರು.
ಆಧಿವೇಶನ ಮಾಡುವ ಬಗ್ಗೆ ಸಿದ್ಧತೆ ಇಲ್ಲವೇ?
ಸೆಪ್ಟೆಂಬರ್ 13 ರಿಂದ 24ರವರೆಗೂ ವಿಧಾನಸಭೆ ಆಧಿವೇಶನ ನಡೆಯುವ ಬಗ್ಗೆ ಮಾತನಾಡಿ, ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡುವ ಬಗ್ಗೆ ಸರ್ಕಾರ ಹೇಳಿತ್ತು. ಆದರೀಗ ಬೆಂಗಳೂರಿನಲ್ಲಿ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಮಾಡದೇ ಇರುವುದು ಅವರ ಮೊದಲ ತಪ್ಪು. ಈ ಮೂಲಕ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈಗ ಇಲ್ಲೇ ಮಾಡುತ್ತಾರೆ ಎಂದು ನನಗೆ ಮಾಹಿತಿಯಿದೆ. ಆಧಿವೇಶನ ಮಾಡುವ ಬಗ್ಗೆ ಸಿದ್ಧತೆ ಇಲ್ಲವೇ? ಎಂದು ಪ್ರಶ್ನಿಸಿದರು.
ನಮ್ಮ ಪ್ರಶ್ನೆ ಏನಿದೆ ಎಂಬುದನ್ನು ಈಗ ಹೇಳುವುದಿಲ್ಲ:
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹಣವೇ ನೀಡಿಲ್ಲ. ಈಗಿನ ಮುಖ್ಯಮಂತ್ರಿಗಳು ಆ ಭಾಗದವರೇ. ಜನರು ಬಂದು ಕೇಳುತ್ತಾರೆ, ಪ್ರತಿಭಟನೆ ಮಾಡುತ್ತಾರೆ ಅನ್ನೋ ಭಯದಿಂದ ಅಧಿವೇಶನವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ. ನಮ್ಮ ಪ್ರಶ್ನೆ ಏನಿದೆ ಎಂದು ನಾವು ಈಗ ಹೇಳುವುದಿಲ್ಲ. ಆಧಿವೇಶನದಲ್ಲಿ ಚರ್ಚೆ ನಡೆಸುತ್ತೇವೆ. ಜನರ ಸೇವೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಜನಾಶೀರ್ವಾದ ಮೆರವಣಿಗೆಯಲ್ಲಿ ಗುಂಡು ಹಾರಿಸಿದ ವಿಚಾರ:
ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಜನಾಶೀರ್ವಾದ ಮೆರವಣಿಗೆಯಲ್ಲಿ ಗುಂಡು ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಂದೂಕಿಗೆ ಲೈಸೆನ್ಸ್ ಕೊಟ್ಟವರು ಯಾರು? ಏಕೆ ಇನ್ನೂ ಅವರನ್ನು ಅರೆಸ್ಟ್ ಮಾಡಿಲ್ಲ? ಏಕೆ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಕ್ರಮ ಕೈಗೊಳ್ಳಲು ಸಿಎಂ ಬಸವರಾಜ್ ಬೊಮ್ಮಾಯಿಗೆ ಎಲ್ಲಿದೆ ಶಕ್ತಿ.
ಹೋಂ ಮಿನಿಸ್ಟರ್ಗೆ ತಮ್ಮ ಜವಾಬ್ದಾರಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ. ಬೇರೆ ಯಾವುದಾದರೂ ಖಾತೆ ತೆಗೆದುಕೊಂಡು ಹೋಗಲಿ. ಪಾಪಾ ಇನ್ನೂ ಹೊಸದು, ಆಗಲ್ಲ ಅವರ ಕೈಯಲ್ಲಿ. ಯಾವುದೋ ಒತ್ತಡದಲ್ಲಿ ಖಾತೆ ನೀಡಿದ್ದಾರೆ. ಯಾರಿಗೆ ಬೇಕಾದರೂ ಕೊಟ್ಟುಕೊಳ್ಳಲಿ ನಮಗೆ ಚಿಂತೆಯಿಲ್ಲ ಎಂದು ಮಾತಿನಲ್ಲೇ ಬಿಜೆಪಿ ಸರ್ಕಾರವನ್ನು ತಿವಿದರು.