ಬೆಂಗಳೂರು: ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದು ಎಂದು ಹೇಳುವಷ್ಟು ಮೂರ್ಖರು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದೆಂದು ನಾವು ಎಲ್ಲೂ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕಿದೆ. ಇದನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆ ಎಂದರು.
ಕೇಂದ್ರ ಸಚಿವರು ಬಂದು ಹರ್ ಘರ್ ತಿರಂಗಾ ಅಭಿಯಾನ ಮಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕ್ರಮ ಹೈಜಾಕ್ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಕಾರ್ಯಕ್ರಮ ಮಾಡಲಿ. ಅವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಬುದ್ಧಿ ಬಂದಿರುವುದಕ್ಕೆ ನಾವು ಸಂತೋಷಪಡಬೇಕು. ನಾವು ಇಂತಹ ಚಿಲ್ಲರೆ ಚಿಂತನೆ ಮಾಡಬಾರದು. ನಮಗೆ ಮೊದಲು ರಾಷ್ಟ್ರ ಆದ್ಯತೆ ಆಗಿರಬೇಕು.
ಯಾರೋ ಒಬ್ಬ ರಾಷ್ಟ್ರಧ್ವಜ ತೆಗೆದು ಭಾಗವಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದ. ಅದರ ಬದಲು ಇಂತಹ ಕಾರ್ಯಕ್ರಮ ಮಾಡಲಿ. ದೇಶಪ್ರೇಮ ಬರಲಿ. ಆರ್ಎಸ್ಎಸ್ ಕೂಡ ರಾಷ್ಟ್ರಧ್ವಜ ಹಾರಿಸಿದೆ ಎಂಬ ಸುದ್ದಿ ಕೇಳಿ ನನಗೆ ಸಂತೋಷವಾಯಿತು. ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ.. ಹೀಗಂದ್ರಾ ಸಚಿವ ಮಾಧುಸ್ವಾಮಿ?