ಬೆಂಗಳೂರು/ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.
2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿಯವರು ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಮತ್ತು ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನ ಗಳಿಸಿ ಕೊಡುವಂತೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಹೈಕಮಾಂಡ್ ಸಾಥ್
ರಾಜ್ಯ ಕಾಂಗ್ರೆಸ್ ಬಲವರ್ಧನೆ, ಪ್ರಗತಿ ಹಾಗೂ ಉನ್ನತಿಗೆ ಅಗತ್ಯವಿರುವ ಯಾವುದೇ ಕ್ರಮಕೈಗೊಳ್ಳುವುದಾರೆ ಅದಕ್ಕೆ ಪಕ್ಷದ ಹೈಕಮಾಂಡ್ ಸಹಕಾರ ಇರಲಿದೆ. ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭ ಹೈಕಮಾಂಡನ್ನು ಹಾಗೂ ರಾಜ್ಯದ ಇತರ ಕಾಂಗ್ರೆಸ್ ನಾಯಕರನ್ನು ಪರಿಗಣಿಸಿ. ಸಣ್ಣಪುಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ನೀವೇ ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಸಿಎಂ ಸ್ಥಾನದ ಕುರಿತು ಮಾತನಾಡುವರ ಮೇಲೆ ಕಠಿಣ ಕ್ರಮ
ರಾಜ್ಯದಲ್ಲಿ ನಾಯಕತ್ವದ ವಿಚಾರವಾಗಿ ಕಾಂಗ್ರೆಸ್ನಲ್ಲಿ ಕೆಲ ಗೊಂದಲ ಇರುವುದನ್ನು ಪ್ರಶ್ನಿಸಿದ ರಾಗಾ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ನಾಯಕತ್ವ ಜವಾಬ್ದಾರಿಯ ಕುರಿತು ಅಧಿಕಾರಕ್ಕೆ ಬಂದ ನಂತರ ಪಕ್ಷವೇ ತೀರ್ಮಾನಿಸುತ್ತದೆ. ಯಾವುದೇ ರಾಜ್ಯ ನಾಯಕರಿಗೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ.
ಮುಂದಿನ ದಿನಗಳಲ್ಲಿ ಸಿಎಂ ಅಥವಾ ನಾಯಕತ್ವದ ವಿಚಾರವಾಗಿ ಯಾವುದೇ ನಾಯಕರನ್ನು ಮುಖ್ಯವಾಗಿಸಿಕೊಂಡು ಹೇಳಿಕೆ ನೀಡದಂತೆ ನೋಡಿಕೊಳ್ಳಿ. ಅನಗತ್ಯವಾಗಿ ಪದೇಪದೆ ಇಂತಹ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿಕೆಶಿಯವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ಯುವಕರಿಗೆ ಅವಕಾಶ ನೀಡಿ
ಪಕ್ಷಕ್ಕೆ ದೀರ್ಘಾವಧಿ ಸೇವೆಸಲ್ಲಿಸುವ ಯುವ ನಾಯಕರುಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಮುಂಬರುವ ವಿಧಾನಸಭೆ ಚುನಾವಣೆಗೆ ಹೆಚ್ಚು ಪರಿಶ್ರಮ ತೊಡಗಿಸುವವರನ್ನು ಗುರುತಿಸಿ ಅವಕಾಶ ನೀಡಿ. ಪಕ್ಷಕ್ಕೆ ಹಾನಿ ಉಂಟು ಮಾಡುವ ನಾಯಕರಿಗೆ ಪ್ರಾಧಾನ್ಯತೆ ಕಡಿಮೆ ಮಾಡಿ. ಕೇವಲ ಹುದ್ದೆಗಾಗಿ ಪ್ರಯತ್ನಿಸುವ ನಾಯಕರಿಗೆ ಅವಕಾಶ ನೀಡಬೇಡಿ. ಶ್ರಮಪಟ್ಟು ಪಕ್ಷ ಕಟ್ಟುವ ಸಾಮರ್ಥ್ಯ ಇರುವವರಿಗೆ ಆಯಕಟ್ಟಿನ ಸ್ಥಾನಗಳಲ್ಲಿ ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಇದೆ.