ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೊದಲು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾಪಣೆ ಮಾಡಿದ ಬಳಿಕ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ತಾಯಿ ಭಾರತ ಮಾತೆ ಸ್ವತಂತ್ರಳಾಗಿ ಇಂದಿಗೆ 75 ವರ್ಷ ತುಂಬಿದೆ. ಭಾರತ ಎಂದರೆ ನಮ್ಮ ಹೆಮ್ಮೆ. ಕೆಂಪುಕೋಟೆಯಲ್ಲಿ ಆರಂಭವಾದ ಧ್ವಜಾರೋಹಣ ಇಂದು ಪ್ರತಿ ಹಳ್ಳಿಯನ್ನು ತಲುಪಿದೆ. ನಾವು ನಮ್ಮ ಸಂವಿಧಾನ ಹಾಗೂ ಸ್ವಾತಂತ್ರದ ಇತಿಹಾಸವನ್ನು ಓದಬೇಕು. ಆಗ ಮಾತ್ರ ಹೋರಾಟದ ಅರಿವು ಆಗಲಿದೆ.
ನಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ನಮಗಿದೆ. ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಸಾಕಷ್ಟು ಮಂದಿ ತಮ್ಮ ಕೊನೆಯ ಉಸಿರು ಇರುವವರೆಗೂ ದೇಶಕ್ಕಾಗಿ ಹೋರಾಡಿದ್ದಾರೆ ಎಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ: ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಹೊಸ ಆಯಾಮ ನೀಡಿದರು. ಇವರ ಜೊತೆ ಹಲವು ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಹಿಂಸೆ ಹಾಗೂ ಶಾಂತಿಯ ಹೋರಾಟವನ್ನು ನಡೆಸಿದರು. ಇದರ ಫಲವಾಗಿ 1947ರಲ್ಲಿ ನಮಗೆ ಸ್ವಾತಂತ್ರ್ಯ ಲಭಿಸಿತು. ಸ್ವತಂತ್ರಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳಬೇಕಾದ ಪವಿತ್ರ ದಿನ ಇಂದು.
ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯದಲ್ಲಿ ಕಾಂಗ್ರೆಸ್ ತೊಡಗಿದೆ. ಕೋಮು ಸಾಮರಸ್ಯ ಗಟ್ಟಿಗೊಳಿಸುವ ಹೋರಾಟವನ್ನು ಕಾಂಗ್ರೆಸ್ ನಡೆಸಿದೆ. ಸರ್ವರು ಸಮಾನರು ಎಂದು ಪರಿಗಣಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ಸಾಮಾಜಿಕ ನ್ಯಾಯದ ಪರಿಕಲ್ಪನೆ ನಮ್ಮದು.
ನಮ್ಮ ಸಂವಿಧಾನ ನಮ್ಮವರ ಹೋರಾಟದಿಂದಾಗಿ ಸಂವಿಧಾನ ಭಾರತದ ಧ್ವಜ ರಾಷ್ಟ್ರಗೀತೆ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು. ಆಡಳಿತ ರೂಡ ಸರ್ಕಾರ ಹಾಗೂ ಇತರರು ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಮುಂದಾಗಿದ್ದು ಇವರ ವಿರುದ್ಧ ಹೋರಾಡಿ ಜನರಲ್ಲಿ ಧೈರ್ಯ ತುಂಬುವ ಕಾರ್ಯವನ್ನು ನಾವು ಮಾಡಬೇಕಿದೆ. ದೇಶದಲ್ಲಿ ಅಭದ್ರತೆ ಮೂಡಿಸುತ್ತಿರುವ ಆಡಳಿತ ರೂಢ ಸರ್ಕಾರದ ವಿರುದ್ಧ ದನಿಯೆತ್ತ ಬೇಕಿದೆ. ಈ ಮೂಲಕ ಸ್ವಾತಂತ್ರ್ಯದ ಮೌಲ್ಯ ಉಳಿಸಿ ಬೆಳೆಸೋಣ.
ಕಾಂಗ್ರೆಸ್ ಪಕ್ಷದ ಹೋರಾಟದ ಪರಂಪರೆಯನ್ನು ಮತ್ತೆ ಪ್ರದರ್ಶಿಸೋಣ. ಸಾಕಷ್ಟು ಗಂಭೀರ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದು ಇದಕ್ಕೆ ಪರಿಹಾರ ನಮ್ಮಿಂದಲೇ ಆಗಬೇಕು. ಜನಜಾಗೃತಿ ಮೂಡಿಸಿ ಸಾಮಾಜಿಕವಾಗಿ ಎಲ್ಲರನ್ನ ಒಟ್ಟಾಗಿ ಕೊಂಡೊಯ್ಯುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದರು.
ನಡಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು: ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲಿಯೇ ಇದೊಂದು ದೊಡ್ಡ ಸಾಧನೆಯಾಗಿದ್ದು, ಈ ಐತಿಹಾಸಿಕ ಸಾಧನೆಗೆ ಪಾತ್ರರಾದ ನಾಡಿನ ಜನರಿಗೆ ನಮನ ಸಲ್ಲಿಸುತ್ತೇನೆ. ದೇಶದ ಐಕ್ಯತೆ ಸಮಗ್ರತೆ ಹಾಗೂ ಶಾಂತಿಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಈ ದಿನದ ಪಕ್ಷ ಬೇಧವನ್ನ ಮರೆತು ಇಂದಿನ ನಡಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.
ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ ಧ್ವಜ ನೀಡಲಾಗುತ್ತದೆ. ಅಲ್ಲದೇ ಮೆಟ್ರೋದಲ್ಲಿ ಉಚಿತ ಸಂಚಾರ ವ್ಯವಸ್ಥೆಯನ್ನು ಸಹ ಕಲ್ಪಿಸಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳು, ತೊಂದರೆ ಎದುರಾಗಬಹುದು. ಆದರೂ ದೇಶಕ್ಕಾಗಿ ನಾವು ಹೆಜ್ಜೆ ಇಡುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಸಕಾರಾತ್ಮಕವಾಗಿ ಎಲ್ಲವನ್ನು ಸ್ವೀಕರಿಸಬೇಕು ಎಂದು ಡಿಕೆಶಿ ಕರೆ ನೀಡಿದರು.
ಸಮಾರಂಭದಲ್ಲಿ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಈಶ್ವರ್ ಖಂಡ್ರೆ ,ಸಲೀಂ ಅಹ್ಮದ್, ದಿನೇಶ್ ಗುಂಡೂರಾವ್ ಸೇರಿ ಇತರ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ: ಮೊದಲ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ನೇರವೇರಿದ ಧ್ವಜಾರೋಹಣ